Uncategorized

ಏಪ್ರಿಲ್​ 15 ರ ಬೆಳಿಗ್ಗೆ 11ಕ್ಕೆ ಪಿಯು ರಿಸಲ್ಟ್

ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಪಿಯು ಬೋರ್ಡ್​ ಸಖತ್ ಶಾಕ್​ ನೀಡಿದೆ. ಹೌದು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಮುಗಿದ ತಿಂಗಳೊಳಗೆ ಪಿಯು ಬೋರ್ಡ್​ ಫಲಿತಾಂಶ ಪ್ರಕಟಿಸುತ್ತಿದ್ದು, ಪಾಲಕರು ಹಾಗೂ ವಿದ್ಯಾರ್ಥಿಗಳ ಟೆನ್ಷನ್ ​​ಹೆಚ್ಚಿಸಿದೆ.

ಇಂದು ಸಂಜೆ ಪಿಯು ಬೋರ್ಡ್​ ಫಲಿತಾಂಶವನ್ನು ಇನ್ನು ಮೂರು ದಿನಗಳ ನಂತರ ಅಂದ್ರೆ ಏಪ್ರಿಲ್​ 15 ರಂದು ಬೆಳಿಗ್ಗೆ 11 ಗಂಟೆಗೆ ಪ್ರಕಟಿಸುವುದಾಗಿ ಹೇಳಿದೆ. ಏಪ್ರಿಲ್​ 16 ರಂದು ಆಯಾ ಕಾಲೇಜುಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ರಾಜ್ಯದಲ್ಲಿ ಒಟ್ಟು 6 ಲಕ್ಷದ 73 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಸೈನ್ಸ್​, ಆರ್ಟ್ಸ್​ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದಾರೆ.
ಈ ಹಿಂದೆ ಏಪ್ರಿಲ್​​ 22 ಹಾಗೂ 23 ರಂದು ಸಿಇಟಿ ಪರೀಕ್ಷೆ ದಿನಾಂಕ ನಿಗದಿಯಾಗಿತ್ತು. ಆದರೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಸಿಇಟಿ ಪರೀಕ್ಷೆ ದಿನಾಂಕವನ್ನು ಏಪ್ರಿಲ್​ 29 ಹಾಗೂ 30ಕ್ಕೆ ಮುಂದೂಡಲಾಗಿದೆ. ಹೀಗಾಗಿ ಸಿಇಟಿ ಪರೀಕ್ಷೆಗೂ ಮುನ್ನ ರಿಸಲ್ಟ್​ ನೀಡುವ ಉದ್ದೇಶದಿಂದ ಪಿಯು ಬೋರ್ಡ್​ ಏಪ್ರಿಲ್​ 15 ರಂದು ಫಲಿತಾಂಶ ನೀಡಲಿದೆ.
ಈ ಬಾರಿ ಯಾವುದೇ ಚುನಾವಣಾ ಅಕ್ರಮಗಳಿಲ್ಲದೇ ಹಾಗೂ ಯಾವುದೇ ಬಾರಿ ಪ್ರಮಾಣದ ಮಾಸ್ ಕಾಪಿ ಪ್ರಕರಣಗಳನ್ನು ಎದುರಿಸದೇ ಪಿಯು ಬೋರ್ಡ್​ ಯಶಸ್ವಿಯಾಗಿ ಪರೀಕ್ಷೆ ಮುಗಿಸಿದೆ. ಆದರೆ ಸೈನ್ಸ್​​ ನ ಬಯಾಲಜಿ ಪೇಪರ್​ ಹೆಚ್ಚು ಕಠಿಣವಾಗಿದ್ದು, ರಾಜ್ಯದಾದ್ಯಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಪರೀಕ್ಷೆ ಮುಗಿಯುತ್ತಿದ್ದಂತೆ ಗ್ರೇಸ್​ ಮಾರ್ಕ್ಸ್​ ನೀಡಬೇಕೆಂಬ ಆಗ್ರಹವೂ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಈ ಬಾರಿ ಫಲಿತಾಂಶ ಸಾಕಷ್ಟು ಕುತೂಹಲ ಮೂಡಿಸಿದ್ದು, ವಿದ್ಯಾರ್ಥಿಗಳ ಎದೆಯಲ್ಲಿ ನಡುಕ ಆರಂಭವಾಗಿದೆ.

Leave a Comment