ಧಾರ್ಮಿಕ

ನಂಜನಗೂಡು ರಥೋತ್ಸವದ ನಿಗೂಢ ರಹಸ್ಯ.!

ದಕ್ಷಿಣದ ಕಾಶಿ, ಪರಶುರಾಮನ ತಪಸ್ಸಿನ ಸ್ಥಳ ಎಂದೆಲ್ಲ ಕರೆಯಿಸಿಕೊಳ್ಳುವ ಪವಿತ್ರ ಪುಣ್ಯಕ್ಷೇತ್ರ, ಕೋಟ್ಯಂತರ ಜನರ ಭಕ್ತಿ ಭಾವದ ಧಾರ್ಮಿಕ ಕೇಂದ್ರ ಮೈಸೂರು ಜಿಲ್ಲೆಯ ಮಡಿಲಲ್ಲಿರುವ ನಂಜನಗೂಡು. ಪೌರಾಣಿಕ ಮಹತ್ವವುಳ್ಳ ನಂಜನಗೂಡಿನ ಐತಿಹಾಸಿಕ ನಂಜುಡೇಶ್ವರ ದೇವಾಲಯವು ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಪ್ರತಿದಿನ ರಾಜ್ಯದ ಮೂಲಗಳಿಂದಷ್ಟೇ ಅಲ್ಲದೇ, ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರ ದಂಡು ಆಗಮಿಸುತ್ತದೆ. ಆದರೆ ವರ್ಷಕ್ಕೆ ಒಮ್ಮೆ ಮಾತ್ರ ಇಲ್ಲಿಗೆ ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಫಲ್ಗುಣ ಮಾಸದಲ್ಲಿ ಶುಕ್ಲ ಪಕ್ಷದ ತ್ರಯೋದಶಿಯ ಆ ಸುದಿನವೇ ಪಂಚಮಹಾರಥೋತ್ಸವದ ಅಮೃತ ಘಳಿಗೆ‌.

ನಂಜನಗೂಡಿನ ಈ ಪಂಚಮಹಾರಥೋತ್ಸವ ತನ್ನದೇ ಆದ ವೈಶಿಷ್ಟ್ಯ, ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿದೆ. ರಥೋತ್ಸವ ಎಂದರೆ ಅದು ಕೇವಲ ಧಾರ್ಮಿಕ ಆಚರಣೆ ಅಲ್ಲ, ಅದೊಂದು ಹಬ್ಬ, ಸಡಗರ, ಸಂಭ್ರಮ. ಈ ಐತಿಹಾಸಿಕ ಜಾತ್ರೆಯಲ್ಲಿ ಪಾಲ್ಗೊಳ್ಳಲು ಜನ ಚಾತಕ ಪಕ್ಷಿಯಂತೆ ಪ್ರತಿ ವರ್ಷವೂ ಕಾಯುತ್ತಿರುತ್ತಾರೆ.

ಈ ರಥೋತ್ಸವ ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕ. ಧಾರ್ಮಿಕ ಚೌಕಟ್ಟಿನಲ್ಲಿ ನಡೆಯುವ ಕಾರ್ಯಕ್ರಮವಾದರೂ ಇದರ ಫಲಗಳು ಇಂದಿನ ಸಮಾಜಕ್ಕೆ ಅತ್ಯಮೂಲ್ಯವಾದದ್ದು. ಪ್ರತಿವರ್ಷ ಸುಮಾರು ಒಂದೂವರೆ ಲಕ್ಷ ಜನ ಶ್ರದ್ಧಾ-ಭಕ್ತಿಯಿಂದ ಈ ಐತಿಹಾಸಿಕ ರಥೋತ್ಸವದಲ್ಲಿ ಭಾಗಿ ಆಗುತ್ತಾರೆ. ಇದು ಕೇವಲ ಕಣ್ತುಂಬಿಕೊಳ್ಳುವ ರಥೋತ್ಸವ ಅಲ್ಲ, ಇದು ಹೃದಯಗಳನ್ನು ಬೆಸೆಯುವ ಬಾಂಧವ್ಯದ ಉತ್ಸವ. ನಮ್ಮ ಸಂಸ್ಕೃತಿ, ಜಾನಪದ ಕಲೆಯನ್ನು ಪಸರಿಸುವ ಉತ್ಸವ, ಸಮಾಜವನ್ನು ಒಗ್ಗೂಡಿಸುವ ಉತ್ಸವ, ಅತಿಥಿ ಸತ್ಕಾರದ ಮಹತ್ವವನ್ನು ಸಾರುವ ಮಹಾ ಉತ್ಸವ. ಬಂಧು-ಬಳಗ ಸಂಧಿಸುವ ಉತ್ಸವ. ಮಾನಸಿಕ ಜಂಜಾಟ, ಒತ್ತಡ ನೀಗಿಸುವ ಉತ್ಸವ. ಮನ ಅರಳಿಸುವ, ಮುದ ನೀಡುವ, ಜನ್ಮಸಾರ್ಥಕ ಭಾವನೆ ಮೇಳೈಸುವ ಉತ್ಸವ.

ಇದು ಓದಿ ತಿಳಿಯುವಂತಹದ್ದಲ್ಲ, ಕೇಳಿ ಆನಂದಿಸುವಂತಹದ್ದಲ್ಲ, ವೀಡಿಯೋದ

ಲ್ಲಿ ನೋಡಿ ಸಂತಸ ಪಡುವಂತಹದ್ದಲ್ಲ, ಇದು ಪ್ರತ್ಯಕ್ಷವಾಗಿ ಭಾಗಿಯಾಗಿ ಅನುಭವಿಸಬೇಕಾದಂತಹ ಅನುಪಮ ಉತ್ಸವ. ಇದು ನಮ್ಮ ಜೀವನ ಪಯಣದ ಸಿಂಹಾವಲೋಕನಕ್ಕೆ ಅನುವು ಮಾಡಿಕೊಡುವ ಉತ್ಸವ, ಆಧುನಿಕ ಜೀವನ ಪದ್ಧತಿಯ ಜಂಜಾಟದಲ್ಲಿ ಏನೆಲ್ಲಾ ಕಳೆದು ಕೊಳ್ಳುತ್ತಿದ್ದೇವೆ ಎಂದು ತಿಳಿಸುವ ಉತ್ಸವ. ಮುಂದಿನ ಅರ್ಥಗರ್ಭಿತ, ಸಾರ್ಥಕ ಪಯಣಕ್ಕೆ ದಿಕ್ಸೂಚಿಯಾಗುವ ಉತ್ಸವ. ಬಿಸಿಲ ಝಳದಿಂದ ತತ್ತರಿಸಿದ ಜನತೆಗೆ ಹಲವಾರು ಸಂಘ ಸಂಸ್ಥೆಗಳು, ದಾನಿಗಳು ಅನ್ನದಾನ, ತಂಪು ಪಾನೀಯ, ಮಜ್ಜಿಗೆ, ಹಣ್ಣು ಹಂಫಲು, ಪೆಪ್ಪರ್ ಮೆಂಟ್, ಚಾಕೊಲೇಟ್ ನೀಡಿ ತಮ್ಮ ಔದಾರ್ಯ ತೋರುತ್ತಾರೆ.

ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರ ದೇವರ ಪಂಚಮಹಾರಥೋತ್ಸವ ಇಂದು ನಿನ್ನೆಯದಲ್ಲ‌, ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರತಿವರ್ಷ ಸಂಪ್ರದಾಯಬದ್ಧವಾಗಿ ನಡೆಯುವ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಸಂತಸದಿಂದ ಪಾಲ್ಗೊಂಡು ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ.

ಆಗಮಿಕ ಸಂಪ್ರದಾಯದಂತೆ ಗಣಪತಿ, ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ,, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ದೇವರ ಉತ್ಸವ ಮೂರ್ತಿಗಳನ್ನು ದೇವಾಲಯದಿಂದ ತಂದು ಅಲಂಕೃತ ರಥಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಬಳಿಕ ಅರ್ಚಕರು ವಿಧಿ-ವಿಧಾನ ಪೊರೈಸಿದ ಬಳಿಕ ಮೊದಲು ಗಣಪತಿ ರಥವನ್ನು ಎಳೆಯಲಾಗುತ್ತದೆ, ನಂತರ ಶ್ರೀಕಂಠೇಶ್ವರ ಸ್ವಾಮಿಯ ಬೃಹತ್ ರಥದ ಸರದಿ. ತರುವಾಯ ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ರಥಗಳು ಹಿಂಬಾಲಿಸುತ್ತವೆ.

ಸುಮಾರು 95 ಅಡಿ ಎತ್ತರ ಹಾಗೂ 50 ಟನ್ ಗೂ ಅಧಿಕ ಭಾರದ ಶ್ರೀಕಂಟೇಶ್ವರ ರಥವೇ ಒಂದು ವಿಸ್ಮಯ. ಇದನ್ನು ನೋಡಲು ನೀವು ಆಗಸಕ್ಕೆ ಮುಖ ಮಾಡಬೇಕು. ಈ ರಥವನ್ನು ಎಳೆಯುವುದು ಸಾಮಾನ್ಯ ವಿಚಾರವಲ್ಲ, ಇದೊಂದು ಸವಾಲಿನ ಕೆಲಸ, ಸಾಹಸದ ಕೆಲಸ. ೫೦ ಟನ್ ತೂಕದ ರಥ ಎಳೆಯಲು ಶಕ್ತಿ ಸಾಲದೆ ಹೆಬ್ಬಾವಿನಂತ ಹಗ್ಗಗಳೇ ತುಂಡಾಗಿ ಬೀಳುತ್ತದೆ. ಸಹಸ್ರಾರು ಜನರ ತೋಳ್ಬಲದ ಶಕ್ತಿ ಸಾಲದೆ, ರಥವನ್ನು ತಳ್ಳಲು ಜೆಸಿಬಿ ಬಳಸಲಾಗುತ್ತದೆ. ಶ್ರೀಕಂಠೇಶ್ವರನ ರಥದ ಎದುರು ಬೃಹದಾಕಾರದ ಜೆಸಿಬಿ ಮಕ್ಕಳ ಆಟಿಕೆಯಂತೆ ಗೋಚರವಾಗುತ್ತದೆ, ರಥವನ್ನು ತಳ್ಳುವ ಕಾಯಕದಲ್ಲಿ ಹಲವು ಬಾರಿ ಮುಗ್ಗರಿಸುವುದೂ ಉಂಟು. ಇನ್ನು ಒಮ್ಮೆ ರಥಕ್ಕೆ ಚಾಲನೆ ಸಿಕ್ಕ ಮೇಲೆ ಅದನ್ನು ನಿಯಂತ್ರಣ ಮಾಡುವುದು ಸಾಮಾನ್ಯ ಕೆಲಸವೇನಲ್ಲ. ರಥವನ್ನು ಎಳೆಯಲೇನೊ ಸಹಸ್ರಾರು ಕೈಗಳುಂಟು ಆದರೆ ಆಗಸದೆತ್ತರದ ರಥವನ್ನು ನಿಯಂತ್ರಿಸಲು ಇರುವುದು ಹತ್ತಾರು ಕೈಗಳು, ಮರದ ನಿಯಂತ್ರಕಗಳು ಮಾತ್ರ.

ಇನ್ನು ರಥ ಬೀದಿಯ ಇಕ್ಕೆಲಗಳಲ್ಲಿ ಲಕ್ಷಾಂತರ ಭಕ್ತರು ನೆರೆದಿರುತ್ತಾರೆ. ಮನೆ, ಮಂದಿರ, ಮಹಡಿ, ಮೇಲ್ಮಹಡಿ ಎಲ್ಲೆಡೆಯೂ ಭಕ್ತರ ದಂಡೇ ಇರುತ್ತದೆ. ಶ್ರೀಕಂಠೇಶ್ವರ ಸ್ವಾಮಿಯನ್ನು ಹೊತ್ತ 10 ಅಡಿ ವ್ಯಾಸದ ಬೃಹತ್ ಚಕ್ರಗಳನ್ನೊಳಗೊಂಡಿರುವ, ವಿಶಿಷ್ಟ ಕಲಾ ಕೆತ್ತನೆ ನಾನಾ ಬಣ್ಣದ ವಸ್ತ್ರಗಳು, ವಿವಿಧ ಬಗೆಯ ಪುಷ್ಪಗಳು ಬಣ್ಣದ ಧ್ವಜಗಳಿಂದ ಅಲಂಕೃತಗೊಂಡ ಬೃಹತ್ ರಥವನ್ನು ಉತ್ಸವದ ಆಕರ್ಷಣೆಯ ಕೇಂದ್ರ ಬಿಂದು. ಜಾತಿ-ಧರ್ಮ, ಆಸ್ತಿ-ಅಂತಸ್ತುಗಳ ಬೇಧವಿಲ್ಲದೆ ಎಲ್ಲಾ ವರ್ಗದ ಜನರು ಭಕ್ತಿ ಭಾವದಿಂದ ರಥವನ್ನು ಎಳೆದು ಪುನೀತರಾಗುತ್ತಾರೆ.

ಇದು ದಕ್ಷಿರ ಭಾರತದ ಏಕೈಕ ಪಂಚಮಹಾರಥೋತ್ಸವವಾಗಿದ್ದು, ಈ ಜಾತ್ರೆಯಲ್ಲಿ ಸುತ್ತಮುತ್ತಲ ಊರುಗಳನ ನವದಂಪತಿಗಳು ಕಡ್ಡಾಯವಾಗಿ ಪಾಲ್ಗೊಳ್ಳುವುದು ಮತ್ತೊಂದು ವಿಶೇಷ. ಎತ್ತರದ ರಥದಲ್ಲಿ ಕೂತು ಕಂಗೊಳಿಸುವ ಭವ್ಯ ಶ್ರೀಕಂಠೇಶ್ವರನಿಗೆ ಭಕ್ತರು ಬಾಳೆಹಣ್ಣು, ತೇರುಗಾಣಿಕೆ ಎಸೆಯುವ ದೃಶ್ಯವೇ ಒಂದು ಮೋಹಕ..

ನಂಜನಗೂಡು ಅತ್ಯಂತ ಪ್ರಾಚೀನ ಶಿವ ದೇವಾಲಯವಾಗಿದ್ದು, ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಪ್ರಾಚೀನ ಕಾಲದಿಂದಲೂ ಈ ಸ್ಥಳ ಶಿವನ ಆವಾಸಸ್ಥಾನವಾಗಿತ್ತು ಎಂಬ ನಂಬಿಕೆ ಇದ್ದು, ಸಮುದ್ರ ಮಥನ ಕಾಲದಲ್ಲಿ ಉತ್ಪತ್ತಿಯಾದ ವಿಷವನ್ನು ಕುಡಿದ ನಂಜುಡೇಶ್ವರನು ಇಲ್ಲಿ ನೆಲೆನಿಂತಿದ್ದಾನೆ ಎಂಬುದು ಪೌರಾಣಿಕ ಹಿನ್ನೆಲೆ. ಮೈಸೂರನ್ನು ಆಳಿದ ಹೈದ್ರಾಲಿ ಹಾಗೂ ಟಿಪ್ಪು ಸುಲ್ತಾನರು ಈ ದೇವಾಲಯದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಎಂಬುದು ಇತಿಹಾಸ. ಒಮ್ಮೆ ಟಿಪ್ಪುವಿನ ಪಟ್ಟದ ಆನೆಗೆ ಕಣ್ಣಿನ ಬೇನೆ ಉಂಟಾಗಿ ಎಲ್ಲಿಯೂ ವಾಸಿಯಾಗದೇ ದೃಷ್ಟಿಗೆ ಕುಂದಾಗಿತ್ತು. ಎಲ್ಲಾ ರೀತಿಯ ಪ್ರಯತ್ನಗಳು ವಿಫಲವಾದಾಗ ಆಸ್ಥಾನ ವೈದ್ಯರ ಸಲಹೆಯಂತೆ ಟಿಪ್ಪು ನಂಜುಡೇಶ್ವರ ಮೊರೆ ಹೊಕ್ಕು ಹರಕೆ ಹೊತ್ತುಕೊಂಡ. ನಂಜುಂಡೇಶ್ವರನ ಕೃಪಾ ಕಟಾಕ್ಷದಿಂದ ಪಟ್ಟದ ಆನೆಯ ಸಂಕಷ್ಟ ನೀಗಿ ಮತ್ತೆ ದೃಷ್ಟಿ ಬಂದಿತು. ಇದರಿಂದ ಸಂತಸಗೊಂಡ ಟಿಪ್ಪು ಹಕೀಮ್ ನಂಜುಂಡ ಅರ್ಥಾತ್ ವೈದ್ಯ ನಂಜುಂಡ ಎಂದು ಕರೆದು ಅಮೂಲ್ಯವಾದ ಪಚ್ಚೆ ಲಿಂಗವನ್ನು ದೇಗುಲಕ್ಕೆ ಅರ್ಪಿಸಿದ. ಮನುಷ್ಯ ಅರಿತೋ ಅರಿಯದೆಯೋ ಮಾಡಿದ ಪಾಪಗಳು ಈ ಕ್ಷೇತ್ರ ದರ್ಶನ ಹಾಗೂ ತೀರ್ಥಸ್ನಾನದಿಂದ ಪರಿಹಾರವಾಗುತ್ತದೆ ಎಂಬುದು ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವಿಶೇಷತೆ.

5 Comments

Leave a Comment