ಧಾರ್ಮಿಕ

ವಿಷ್ಣು ವೈಭವ ಭಾಗ-2


(ಅರ್ಥ ವಿವರಣೆ-ಶ್ರೀಮತಿ ರೇವತಿ ಶ್ರೀಕಾಂತ್)

ಯೋಗೋ ಯೋಗವಿದಾಂ ನೇತಾ
ಪ್ರಧಾನ ಪುರುಷೇಶ್ವರಃ
ನಾರಸಿಂಹವಪುಃ ಶ್ರೀಮಾನ್
ಕೇಶವಃ ಪುರುಷೋತ್ತಮಃ.


ಸಕಲ ತತ್ವವನು ಒಳಗೊಂಡವನೇ
ಸಕಲ ಜೀವವನು ತುಂಬಿಕೊಂಡವನೇ
ಯೋಗಾಚಾರ್ಯನೇ ಮಹಾಯೋಗಿಯೇ
ಧರ್ಮವ ರಕ್ಷಿಸಿ ಮುನ್ನಡೆಸುವನೇ
ನರರೊಳು ಸಿಂಹನೆ ಲಕ್ಷ್ಮಿಯರಸನೇ
ಕೇಶವನೇ ಪುರುಷೋತ್ತಮನೇ

ಸರ್ವಃ ಶರ್ವಃ ಶಿವಃ ಸ್ಥಾಣೋ
ಭೂತಾದಿರ್ನಿಧಿರವ್ಯಯಃ
ಸಂಭವೋ ಭಾವನೋ ಭರ್ತ
ಪ್ರಭವಃಪ್ರಭುರೀಶ್ವರಃ

ಸಕಲವು ನೀನೇ ಶುಭಕರ ನೀನೇ
ಸಕಲ ಜೀವವೂ ಹುಡುಕುವ ನಿಧಿಯೇ
ಅಸಾಧ್ಯವೆಂಬುದ ಸಾಧಿಸುವವನೇ
ಭಾವುಕ ಭಕ್ತಿಗೆ ವರನೀಡುವನೇ
ಸಕಲ ಲೋಕವನು ಧರಿಸಿರುವವನೇ
ಅರಸನಿಗರಸನೆ ಚಕ್ರವರ್ತಿಯೇ

ವಿಷ್ಣು ವೈಭವ ವಿವರಣೆ ಭಾಗ-2

ಯೋಗ ಎಂದರೆ ಒಂದುಗೂಡುವಿಕೆ. ಸಕಲ ತತ್ವಗಳಲ್ಲಿ ಒಂದಾಗಿ ಎಲ್ಲವನ್ನೂ ತನ್ನೊಳಗಿರಿಸಿಕೊಂಡು ಆತ್ಮಾರಾಮನಾಗಿ ವಿಹರಿಸುವನು ಯೋಗಿ. ಆ ಮಹಾ ಯೋಗಿ ವಿಷ್ಣು. ಯೋಗ ವಿದಾಂ ಯೋಗವನ್ನು ಹಾಗೂ ಅದರ ಮಹತ್ವವನ್ನು ತಿಳಿದವನು ಮತ್ತು ಮನ್ನಡೆಸಿ ಯೋಗವನ್ನು ಕೊಡುವವನು.

ಪ್ರಧಾನ ಪುರುಷ: ಇಡೀ ಸೃಷ್ಟಿಯನ್ನು ತನ್ನ ಒಡೆತನದಲ್ಲಿಟ್ಟುಕೊಂಡಿರುವ ಪರಮ ಪುರುಷ. ನರಸಿಂಹನ ಸ್ವರೂಪ ಎಂದೂ ಭಾವಿಸಬಹುದು. ಅಥವಾ ನರರೂಪದ ಸಿಂಹದಂತ ಪರಾಕ್ರಮಿ ಎಂದೂ ತಿಳಿದುಕೊಳ್ಳಬಹುದು.

ಶ್ರೀಮಾನ್ ಎಂದರೆ ಶ್ರೀ ಅರ್ಥಾತ್ ಲಕ್ಷ್ಮಿಯನ್ನು ಹೊಂದಿದವನು. ಕೇಶವನುಪುರುಷೋತ್ತಮನು.
ಸರ್ವಃ ಎಲ್ಲವೂ ಎಂದರೆ ಕಲ್ಪನೆಗೆ ನಿಲುಕದ್ದು, ಕಣ್ಣಿಗೆ ಕಂಡದ್ದು. ಶರ್ವ ಎಂಬುದು ಶಿವನಿಗೂ ಬಳಸುತ್ತಾರೆ. ಅದರ ಪದಾರ್ಥ ತಿಳಿದಿದ್ದಲ್ಲಿ ತಿಳಿಸಬಹುದು.

ಶಿವಃ ಎಂದರೆ ಮಂಗಳಕರನೂ. ಸ್ಥಾಣೂ: ಅವಿನಾಶಿಯಾದರೂ ನಶ್ವರ ವಸ್ತುವಿನಲ್ಲೂ ನೆಲೆ ನಿಂತವನು.ಸಕಲ ಜೀವರಾಶಿಗೂ ನಿಧಿ ಅವನು, ಕಾರುಣ್ಯ ನಿಧಿ. ಎಂತಹ ನಿಧಿ ಎಂದರೆ ಕಳೆದು ಹೋಗದ ನಿಧಿ. ಎಲ್ಲವನ್ನೂ ಸಂಭವಿಸುವಂತೆ ಮಾಡುವವನು.

ಜೀವನದಲ್ಲಿ ಎಲ್ಲಾ ಘಟನೆಗೂ ಸಾಕ್ಷಿ, ಆದರೆ ಅವನು ಎಂತಹ ಕರುಣಾಮಯಿ ಎಂದರೆ, ಭಾವುಕನೂ ಆಗಿ ಭಕ್ತರ ಕಷ್ಟದಲ್ಲಿ ಕರಗಿಹೋಗುತ್ತಾನೆ.

ಭರ್ತಾ ಎಂದರೆ ಭರಿಸಲ್ಪಡುವವನು. ಹೃದಯದಲ್ಲಿ ಯೋಗಿಗಳು ಸದಾ ಧಾರಣೆ ಮಾಡುವ ಸದಾನಂದ ಪರಮಾತ್ಮ. ಪ್ರಭುವಿಗೇ ಪ್ರಭು, ದೇವರ ದೇವ ಅಖಂಡ ಶಕ್ತಿ ಸ್ವರೂಪ.

ಈಶ್ವರ ಎಂದರೆ ಶಾಶ್ವತ. ನಶ್ವರವಾದ ಜೀವನದಲ್ಲಿ ಶಾಶ್ವತ ಸತ್ಯ. ಬದಲಾಗದ ಸತ್ಯ, ಕೈ ಬಿಡದ ಸತ್ಯ.

Leave a Comment