ಅಂಕಣ

ವಿಷ್ಣು ವೈಭವ-ಭಾಗ 3

(ಅರ್ಥ ವಿವರಣೆ-ಶ್ರೀಮತಿ ರೇವತಿ ಶ್ರೀಕಾಂತ್)

ಸ್ವಯಂಭೂ- ಯಾರೂ ಅವನನ್ನು ಸೃಷ್ಟಿಸಲಿಲ್ಲ. ಅವನು ಸ್ವಯಂಭೂ ಸ್ವಯಂ ಪ್ರಕಾಶ ಅನಾದಿ ಅನಂತ ರೂಪನು. ಯಾವಾಗ ಆ ದಿವ್ಯ ಶಕ್ತಿ ಪ್ರಕಟವಾಯಿತೆಂದು ಯಾರಿಗೂ ತಿಳಿದಿಲ್ಲ. ಆದರೆ ಮಹಿಮೆ ಮಾತ್ರ ಪ್ರಕಟವಾಗುತ್ತಲೇ ಇರುತ್ತದೆ.

ಶಂಭು-ಒಳ್ಳೆಯದನ್ನೇ ಮಾಡುವವನು

ಆದಿತ್ಯ-ಕೋಟಿ ಸೂರ್ಯ ಪ್ರಭೆ ಉಳ್ಳವನು. ಭಗವಂತನನ್ನು ವರ್ಣಿಸುವಾಗ ಕೋಟಿ ಸೂರ್ಯರ ಪ್ರಭೆ ಉಳ್ಳವನು ಎಂದು ಹೇಳುತ್ತಾರೆ. ಆದರೆ ಆ ಪ್ರಭೆ ಕಣ್ಣಿಗೆ ತಂಪನ್ನು ನೀಡುವಂತದ್ದು ಎಂದು ಹೇಳುತ್ತಾರೆ.

ಪುಷ್ಕರಾಕ್ಷ-ಅತ್ಯಂತ ಪುನೀತಗೊಳಿಸುವ ದೃಷ್ಟಿ ಉಳ್ಳವನು. ಅವನ ದೃಷ್ಟಿಗೆ ಪಾತ್ರರಾದವರು ಪಾಪರಾಶಿಗಳನ್ನು ಕಳಚಿಕೊಂಡು ಪುನೀತರಾಗುತ್ತಾರೆ. ಅದಕ್ಕೆ ಭಕ್ತರು ಅವನ ಕಡೆಗಣ್ಣೋಟವನ್ನು ಬೇಡುತ್ತಾರೆ.

ಅನಾದಿ: ಆದಿ, ಅಂತ್ಯ ಎರಡೂ ಇಲ್ಲದವನು. ಜನನ ಮರಣದ ಚಕ್ರದಿಂದ ಪಾರು ಮಾಡುವವನು.

ವಿಧಾತ: ಎಲ್ಲವನ್ನೂ ನೀಡುವವನು, ಎಲ್ಲವನ್ನೂ ಸೃಷ್ಟಿಸಿದವನು. ಸೃಷ್ಟಿಯಲ್ಲಿ ಇರುವ ಎಲ್ಲಾ ತತ್ವಗಳನ್ನು ತನ್ನೊಳಗಿರಿಸಿಕೊಂಡು ಜಗತ್ತನ್ನು ಸಂರಕ್ಷಿಸುತ್ತಿರುವವನು.

ಅಪ್ರಮೇಯ: ಅಳತೆಗೆ ಮೀರಿದವನು, ಅವನನ್ನು ಅಳತೆ ಮಾಡಲು ಸಾಧ್ಯವೇ ಇಲ್ಲ. ಸರ್ವವ್ಯಾಪಿಯನ್ನು ಹೇಗೆ ಅಳತೆ ಮಾಡಲು ಸಾಧ್ಯವೇ ಇಲ್ಲ. ಅವನು ಸರ್ವವ್ಯಾಪಿಯಾದ ಜ್ಯೋತಿ ಸ್ವರೂಪದ ವ್ಯಕ್ತ, ಅವ್ಯಕ್ತ ರೂಪ. ಹೃಷೀಕೇಶನು, ತನ್ನ ನಾಭಿ ಕಮಲದಿಂದ ಬ್ರಹ್ಮನನ್ನು ಸೃಷ್ಟಿಸಿದವನು ಅದಕ್ಕಾಗಿಯೇ ಅವನನ್ನು ಪದ್ಮನಾಭ ಎಂದು ಕರೆಯೂವುದು.

ಅಮರ: ಮರ ಎಂದರೆ ನಾಶ ನಾಶವಿಲ್ಲದವನು ಅಮರ. ಬೆಳಕನ್ನು ಯಾರು ತಾನೆ ನಾಶ ಮಾಡಬಲ್ಲರು?
ಅವನೇ ನಮ್ಮೆಲ್ಲರ ಪ್ರಭು, ಅವನು ಸೃಷ್ಟಿಯನ್ನೇ ಆಳುವ ದೊರೆ. ವಿಶ್ವಕರ್ಮ ದೇವತೆಗಳ ನಿವಾಸವನ್ನು ರಚಿಸುವವನು ಎಂದು ಪುರಾಣಗಳಲ್ಲಿ ಪ್ರಸಿದ್ಧ, ವಿಷ್ಣು ವಿಶ್ವದ ರಚಯಿತ.

ಇಡೀ ವಿಶ್ವ ಎಂಥಾ ಅದ್ಬುತ ರಚನೆ, ಇಲ್ಲಿ ಒಳ್ಳೆಯದು ಕೆಟ್ಟದು ಎಲ್ಲದಕ್ಕೂ ಒಂದು ಅವಕಾಶ. ಯಾವುದೇ ಜೀವಕ್ಕೂ ಅವನದೇ ರಕ್ಷೆ, ಕೆಟ್ಟದ್ದು ಹೆಚ್ಚಿದಾಗ ಶಿಕ್ಷೆ. ಅವನು ನಮಗೆಂದು ಕೊಟ್ಟ ಬದುಕಿನಲ್ಲಿ ಎಲ್ಲರಿಗೂ ಸಮವಾದ ಅವಕಾಶ ಕೊಡುತ್ತಾನೆ. ಅದನ್ನು ನಾವು ಹೇಗೆ ಉಪಯೋಗಿಸುತ್ತೇವೋ ಹಾಗೆ ಅವಕಾಶಗಳನ್ನು ಕೊಡುತ್ತಾನೆ. ನಂತರ ಅದಕ್ಕೆ ತಕ್ಕ ಫಲ ಕೊಡುತ್ತಾನೆ.

ಮನುಕುಲದ ಕಾರಣಕರ್ತ ಅವನೇ, ಮತ್ಸ್ಯಾವತಾರವೆತ್ತಿ ಮನುವಿಗೆ ಅನುಗ್ರಹ ಮಾಡಿದವನು ಮತ್ತು ಧೃವನನ್ನು ನಕ್ಷತ್ರವಾಗಿರುವಂತೆ ಆಶೀರ್ವದಿಸುವನು. ಬದುಕಿನಲ್ಲಿ ಧೃವ ನಕ್ಷತ್ರದಂತೆ ಸ್ಥಿರವಾಗಿ ನಿಂತು ದಿಗ್ದರ್ಶಿಸುವವನು.

Leave a Comment