ಧಾರ್ಮಿಕ

ವಿಷ್ಣು ವೈಭವ ವಿವರಣೆ ಭಾಗ-1

ವಿಷ್ಣು ವೈಭವ

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ

ನಿರ್ವಿಫ್ನಂ ಕುರುಮೇದೇವ ಸರ್ವ ಕಾರ್ಯೇಷು ಸರ್ವದಾ

ನನ್ನ ಬದುಕಿನಲ್ಲಿ ಎಲ್ಲಾ ಕಷ್ಟ ಸುಖಗಳಿಗೆ ಸಾಕ್ಷಿಯಾಗಿ ನನ್ನ ಪಕ್ಕ ನಿಂತು ಕಾಪಾಡಿ ಕರೆದೊಯ್ಯುತ್ತಿರುವ ಕರುಣಾ ಮೂರ್ತಿಯಾದ ಇಡಗುಂಜಿ ಗಣಪತಿಯನ್ನು ಪ್ರಾರ್ಥಿಸಿ ವಿಷ್ಣು ಸಹಸ್ರನಾಮದಲ್ಲಿ ಅಡಕವಾಗಿರುವ ಅರ್ಥವನ್ನು ಒಳಗೊಂಡು ಛಂದೋಬದ್ಧವಾಗಿ ಅದನ್ನು ಕನ್ನಡೀಕರಿಸಲು ಒಂದು ಪ್ರಯತ್ನ ಮಾಡುತ್ತಿದ್ದೇನೆ. ಗುರು ಹಿರಿಯರ ಅನುಗ್ರಹ ಆಶೀರ್ವಾದ ದೊರಕಿ ಹಿಡಿದ ಕಾರ್ಯ ನಿರ್ವಿಘ್ನವಾಗಿ ಪರಿಸಮಾಪ್ತಿ ಆಗಲು ಹರಸಿರೆಂದು ನಿಮ್ಮೆಲ್ವರನ್ನೂ ಕೋರುತ್ತಿದ್ದೇನೆ.

ಶ್ರೀಮತಿ ರೇವತಿ ಶ್ರೀಕಾಂತ್

———————————————————

ವಿಶ್ವಂ ವಿಷ್ಣುರ್ವಷಟ್ಕಾರೋ ಭೂತ ಭವ್ಯ ಭವತ್ಪ್ರಭುಃ

ಭೂತಕೃತ್ಭೂತಭೃದ್ಭಾವೋ ಭೂತಾತ್ಮಾ ಭೂತ ಭಾವನಃ

ವಿಶ್ವಸ್ವರೂಪನೆ ಸರ್ವವ್ಯಾಪಿಯೇ, ಸ್ಥಿತಿಯನು  ವಶದೊಳಗಿರಿಸುವನೇ, ಸಕಲ ಚರಾಚರ ಜೀವರಾಶಿಗೆ ತಂದೆಯಂದದಿ ಸಲಹುವನೇ, ಜೀವಿಯೊಳಗಿನ ಜೀವಸ್ವರೂಪನೇ, ಭಾವದೊಳಗಿನ ಭಾವಸ್ವರೂಪನೆ

ಪೂತಾತ್ಮಾ ಪರಮಾತ್ಮಾಚ ಮುಕ್ತಾನಾಂ ಪರಮಾಗತಿಃ

ಅವ್ಯಯಃ ಪುರುಷಃಸ್ಸಾಕ್ಷೀ ಕ್ಷೇತ್ರಜ್ಞೋಕ್ಷರ ಏವಚ

ನೆನೆದೊಡೆ ಆನಂದ ನೀಡುವ ದೇವನೆ, ಪರಮಾನಂದನೆ ಪರತತ್ವ ರೂಪನೆ, ಮುಕ್ತಿಯರಮನೆಯ ದಾರಿಯನರಸಲು ಕರೆದು ಮುಕ್ತಿಯನು ಕೊಡುವವನೇ, ಕಳೆದು ಹೋಗದ ನಿಧಿಯು ನೀನೇ, ಪರಮಪುರುಷನೇ ಪರಾತ್ಪರನೇ, ದೇಹವೆನ್ನುವ ಮನೆಯೊಳಗಿಹನೇ, ಅವಿನಾಶಿಯುನೀ ಆದಿ ರೂಪನೇ.

——————————————–

ವಿಷ್ಣು ವೈಭವ ವಿವರಣೆ ಭಾಗ -1

ವಿಶ್ವಂ:–

ಸಮಗ್ರ ಸೃಷ್ಟಿಯೇ ವಿಶ್ವ. ವಿಶ್ವಾತ್ಮಕನಾದ ,ವಿಶ್ವವ್ಯಾಪಿಯಾದ ಭಗವಂತನೇ ವಿಷ್ಣು. ವಿಷ್ಣು ಎಂದರೆ ಅದರ ಅರ್ಥ ವ್ಯಾಪಕತೆ.ಸರ್ವವ್ಯಾಪಿ ಎಂದು. ಇಡೀ ಸೃಷ್ಟಿಯ ಸ್ಥಿತಿಯನ್ನು ತನ್ನ ವಶದಲ್ಲಿಟ್ಟುಕೊಂಡು ಪಾಲನೆ ಮಾಡುವವನು. ಪಂಚಭೂತಾತ್ಮಕವಾದ ಪ್ರಪಂಚದಲ್ಲಿ ಪ್ರತಿಯೊಂದು  ಜೀವದಲ್ಲೂ ನೆಲೆಸಿದ್ದಾನೆ. ಎಲ್ಲಾ ಜೀವಿಗಳೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾನೆ. ಆನಂದಮಯನೂ ಆತ್ಮಾರಾಮನೂ ಆಗಿದ್ದಾನೆ ಮತ್ತು ಆನಂದವನ್ನು ಬಯಸಿ ಬರುವವರಿಗೆ ದುಃಖದಿಂದ ಮುಕ್ತನಾಗಲು ಬಯಸುವವರಿಗೆ ಪರಮಾನಂದವನ್ನು ದಯಪಾಲಿಸುವವನು. ನರಾನಾಂ ಅಯನಃ ಎಂಬಂತೆ ಜೀವವನ್ನು ಪಾರುಗಾಣಿಸುವವನು ನಾರಾಯಣ.

ಅಂತಹವನಲ್ಲಿ ಆನಂದವನ್ನು ಹುಡುಕಬೇಕು, ಅವನ ಸ್ಮರಣೆಯಲ್ಲಿ ಎಷ್ಟು ಬೇಕಾದರೂ ಆನಂದವನ್ನು ಕಂಡುಕೊಳ್ಳಬಹುದು. ಅದಕ್ಕೆ ಅವನನ್ನು ಅವ್ಯಯ ಎನ್ನುವುದು. ವ್ಯಯ ಎಂದರೆ ಕಳೆದುಹೋಗುವುದು, ಮುಗಿದು ಹೋಗುವುದು. ಯಾರಲ್ಲಿ ಆನಂದವನ್ನು ಹುಡುಕಿದರೆ ಮುಗಿಯದ ಆನಂದ ದೊರೆಯುತ್ತದೋ ಅವನೇ ಅವ್ಯಯ. ಲೌಕಿಕ ಸುಖ ಭೋಗಗಳಿಗೆ ಸಂತೋಷ ಉಂಟುಮಾಡಲು ಅಲ್ಪ ಪ್ರಮಾಣದ ಅವಧಿ ಮಾತ್ರ ಸಾಧ್ಯ. ಎಂದಿಗೂ ಮುಗಿರದ ಆನಂದ ದೊರಕುವುದು ಅವನಿಂದಲೇ.

ಪುರುಷ ಎಂದು ಕರೆಯಲ್ಪಡುವವನು, ಅವನ ಸೃಷ್ಟಿ ಪ್ರಕೃತಿ. ಅವನೇ ಪುರುಷ, ಪರಮಪುರುಷ. ಅವನು ಎಲ್ಲಾ ಜೀವಗಳಲ್ಲಿ ಅಂತರ್ಗತನಾದ್ದರಿಂದ ಅವನನ್ನು ಸಾಕ್ಷಿ ಎಂದು ಕರೆಯುತ್ತಾರೆ. ಅಂತರಾತ್ಮನ ರೂಪದಲ್ಲ್ಲಿಇರುವವನು ಎಲ್ಲಕ್ಕೂ ಸಾಕ್ಷಿ ಭಾವವಾಗಿರುತ್ತಾನೆ. ಕ್ಷೇತ್ರಜ್ಞನೆನಿಸಿಕೊಳ್ಳುತ್ತಾನೆ. ದೇಹವೆನ್ನುವ ಕ್ಷೇತ್ರಕ್ಕೆ ಅಧಿಪತಿ. ಒಡೆಯ ನಶ್ವರವಾದ ಶರೀರದಲ್ಲಿ ವಾಸಿಸಿದರೂ ಅಕ್ಷರನು, ಕ್ಷರ ಎಂದರೆ ನಾಶ. ಅವಿನಾಶಿಯಾದ ಆತ್ಮರೂಪಿ ಎಂದು ಕರೆಸಿಕೊಳ್ಳುವವನು.

Leave a Comment