ಅಂಕಣ ಸುದ್ದಿಗಳು

ಇಂದು ನಾವು ಅನುಭವಿಸುವ ಕಷ್ಟಗಳಿಗೆ ನಾವು ಈ ಜನ್ಮದಲ್ಲಿ ಮಾಡಿದ ಪಾಪನೇ ಕಾರಣನಾ?

ಅಧ್ಯಾಯ – 06 : ಶ್ಲೋಕ – 40

ಭಗವಾನುವಾಚ ।

ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ ।

ನಹಿ ಕಲ್ಯಾಣಕೃತ್ ಕಶ್ಚಿದ್ ದುರ್ಗತಿಂ ತಾತ ಗಚ್ಛತಿ      ॥೪೦॥

ಭಗವಾನುವಾಚ-ಭಗವಂತ ಹೇಳಿದನು:
ಪಾರ್ಥ ನ ಏವ ಇಹ ನ ಅಮುತ್ರ ವಿನಾಶಃ ತಸ್ಯ ವಿದ್ಯತೇ ।
ನ ಹಿ ಕಲ್ಯಾಣಕೃತ್ ಕಶ್ಚಿತ್  ದುರ್ಗತಿಮ್  ತಾತ ಗಚ್ಛತಿ- ಪಾರ್ಥ, ಅವನ ಸಾಧನೆ ವ್ಯರ್ಥವಲ್ಲ, ಇಹದಲ್ಲಿ ಮತ್ತು ಪರದಲ್ಲಿ. ಅಪ್ಪಾ(ತಾತ), ಒಳಿತನ್ನು ಮಾಡುವವನು ಎಂದೂ ಕೇಡನ್ನು ಪಡೆಯುವುದಿಲ್ಲ.

 

ಅರ್ಜುನನ ಪ್ರಶ್ನೆಗೆ ಕೃಷ್ಣನ ಉತ್ತರ ದೊಡ್ಡ ಭರವಸೆ. ಕೃಷ್ಣ ಹೇಳುತ್ತಾನೆ “ಸಾಧನೆಯ ದಾರಿಯಲ್ಲಿ ಸಾಗಿದವರು ಇಹದಲ್ಲಿ ಅಥವಾ ಪರದಲ್ಲಿ ಏನನ್ನೂ ಕಳೆದುಕೊಳ್ಳುವುದಿಲ್ಲ. ಓ ನನ್ನ ಪ್ರೀತಿಯ ಮಿತ್ರನೇ, ಒಳ್ಳೆಯದನ್ನು ಮಾಡಿದವರು ಎಂದೂ ಕೆಟ್ಟದ್ದನ್ನು ಪಡೆಯುವುದಿಲ್ಲ. ಇದು ಪ್ರಕೃತಿಯ ನಿಯಮ” ಎಂದು. ಇಲ್ಲಿ ಕೃಷ್ಣ ಅರ್ಜುನನನ್ನು ಪಾರ್ಥ ಎಂದು ಸಂಬೋದಿಸಿದ್ದಾನೆ. ಪಾರ್ಥ ಎಂದರೆ ಪಾರವನ್ನು(ದಡವನ್ನು) ತಿಳಿದವನು. ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಟ್ಟವನು ಒಮ್ಮೆಗೆ  ಭಗವಂತನನ್ನು ಕಾಣದಿದ್ದರೂ ಕೂಡಾ ಆತ ಎಂದೂ ಮಧ್ಯದಲ್ಲಿ ಮುಳುಗುವುದಿಲ್ಲ. ಆತ ಸಾಧನೆಯ ಆಚೆ ದಡವನ್ನು ಸೇರಿಯೇ ಸೇರುತ್ತಾನೆ. ಒಳ್ಳೆಯದನ್ನು ಮಾಡಿದವರಿಗೆ ಒಳ್ಳೆಯ ಮಾರ್ಗವನ್ನು ತುಳಿದವರಿಗೆ ಎಂದೂ ಕೆಟ್ಟದ್ದಾಗುವುದಿಲ್ಲ. ನಮ್ಮಲ್ಲಿ ಕೆಲವರು ಹೇಳುವುದಿದೆ: “ನಾನು ನನ್ನ ಜೀವನದಲ್ಲಿ ಎಂದೂ ಕೆಟ್ಟ ಕೆಲಸ ಮಾಡಿಲ್ಲ, ಯಾವತ್ತೂ ಒಬ್ಬರಿಗೆ ಕೇಡನ್ನು ಬಯಸಲಿಲ್ಲ, ಆದರೆ ಏಕೆ ದೇವರು ನನಗೆ ಹೀಗೆ ಮಾಡಿದ?” ಎಂದು.

 

ನಾವು ಜೀವನದಲ್ಲಿ ‘ಕೆಟ್ಟದ್ದನ್ನು ಮಾಡಿಲ್ಲ, ಕೆಟ್ಟದ್ದನ್ನು ಎಣಿಸಿಲ್ಲ’ ಎನ್ನುವುದು ಕೇವಲ ಈ ಜನ್ಮಕ್ಕೆ ಸೀಮಿತ. ಆದರೆ ಜೀವದ ಗತಿ ಅನಾದಿ ಅನಂತ. ಅದು ಜನ್ಮದಿಂದ ಜನ್ಮಕ್ಕೆ ಹರಿದು ಬರುವ ಪ್ರವಾಹ. ನಾವು ಈ ಜನ್ಮದಲ್ಲಿ ಒಂದು ದುರಂತ ಅಥವಾ ಕಷ್ಟಕ್ಕೆ  ಒಳಗಾದರೆ ಅದಕ್ಕೆ ಕಾರಣಭೂತವಾಗಿರುವಂತಹ ಇನ್ನೊಂದು ಕ್ರಿಯೆ ನಮ್ಮಿಂದ ನಡೆದಿರಲೇ ಬೇಕು. ಕೆಟ್ಟದ್ದನ್ನು ಮಾಡದವನು ಕೆಟ್ಟದ್ದನ್ನು ಪಡೆಯುವುದಿಲ್ಲ. ಒಳ್ಳೆಯದನ್ನು ಮಾಡಿದವನು ಒಳ್ಳೆಯದನ್ನು ಪಡೆಯದೆ ಇರುವುದಿಲ್ಲ. ಇದು ಸಾರ್ವಕಾಲಿಕ ಸತ್ಯ. ಇದಕ್ಕೆ ಅಪವಾದವೇ ಇಲ್ಲ. ಅದು ಹೇಗೆ ಎನ್ನುವುದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ.

Leave a Comment