ರಾಜಕೀಯ

ಕೈ ಪಾಳಯದ ಅಸಮಧಾನಕ್ಕೆ ಸಾಕ್ಷಿ ಒದಗಿಸಿದ ಕೆಪಿಸಿಸಿ ಸಭೆ- ಗೈರಾದ್ರು ಪರಂ-ಜಾರಕಿಹೊಳಿ!

ಅದೆಲ್ಲೋ ಕೂತ ಬಿಜೆಪಿ ರಾಜ್ಯ ಸರ್ಕಾರ ಉರುಳುತ್ತೆ ಅನ್ನೋ ಕನಸು ಕಾಣ್ತಿದ್ದರೇ, ಇತ್ತ ಕೈ ಪಾಳಯದಲ್ಲಿ ಅಸಮಧಾನ ನಿಧಾನಕ್ಕೆ ಭುಗಿಲೇಳತೊಡಗಿದೆ. ಒಂದೆಡೆ ಹಿರಿಯ ಕಾಂಗ್ರೆಸ್ ನಾಯಕರು ಸಚಿವ ಸಂಪುಟದಲ್ಲಿ ಸಿಗದ ಸ್ಥಾನಮಾನಕ್ಕೆ ಕೊರಗಿ ಕೆಂಗಣ್ಣು ಬೀರತೊಡಗಿದ್ದರೆ, ಇತ್ತ ಕೆಪಿಸಿಸಿ ನಾಯಕತ್ವ, ಪದಾಧಿಕಾರಿಗಳ ವಿಚಾರದಲ್ಲೂ ಹಲವರು ಸಿಟ್ಟಿಗೆದ್ದಿದ್ದು, ಒಳಗೊಳಗೆ ಕತ್ತೆ ಮಸೆಯುತ್ತಿದ್ದಾರೆ.

ಹೀಗಿರುವಾಗಲೇ ಇಂದು ನಡೆದ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್​ ನೇತೃತ್ವದಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ಕರೆದಿತ್ತು. ಆದರೇ ಈ ಸಭೆ ಕೈ ಪಾಳಯದ ಅಸಮಧಾನಕ್ಕೆ ಸಾಕ್ಷಿ ಒದಗಿಸುವ ವೇದಿಕೆಯಾಗಿದ್ದು ಸುಳ್ಳಲ್ಲ. ಹೌದು ಈ ಸಭೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್ ಗೈರಾಗಿದ್ದು, ಕೆಪಿಸಿಸಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಮೂಡಿಸಿದೆ.

ಮೂಲಗಳ ಪ್ರಕಾರ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಡುವೆ ಮುನಿಸು ಮೂಡಿದ್ದು, ಅದಕ್ಕೆ ಉದ್ದೇಶಪೂರ್ವಕವಾಗಿಯೇ ಪರಂ ಗೈರಾಗಿದ್ದಾರೆ ಎನ್ನಲಾಗಿದೆ. ಇಂದಿನ ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಲಾಗುವುದರಿಂದ ಈ ಸಭೆ ಅತ್ಯಂತ ಮಹತ್ವದ್ದಾಗಿತ್ತು. ಆದರೂ ಪರಂ ಉದ್ದೇಶಪೂರ್ವಕವಾಗಿ ಈ ಸಭೆಯಿಂದ ತಪ್ಪಿಸಿಕೊಂಡಿದ್ದಾರೆ.

ಪರಂ ದಿನೇಶ್ ಗುಂಡೂರಾವ್ ಮೇಲೆ ಮುನಿಸಿಕೊಳ್ಳೋಕು ಬಲವಾದ ಕಾರಣವಿದೆ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ಬ್ಲಾಕ್​ ಕಾಂಗ್ರೆಸ್ ಸಮಿತಿಯನ್ನು ರಾಜ್ಯದಾದ್ಯಂತ ರಚಿಸಿದ್ದರು. ಇದಕ್ಕೆ ತಮ್ಮ ಆಪ್ತರನ್ನು ನೇಮಿಸಿದ್ದರು. ಆದರೇ ಈಗ ಈ ಸಮಿತಿ ನಿಷ್ಕ್ರಿಯವಾಗಿರೋದರಿಂದ ದಿನೇಶ್ ಗುಂಡೂರಾವ್ ಆ ಸಮಿತಿಯನ್ನು ವಿಸರ್ಜಿಸಲು ತೀರ್ಮಾನಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದು ಪರಂಗೆ ಕೋಪಕ್ಕೆ ಕಾರಣವಾಗಿದ್ದು, ಈ ಸಭೆಯಲ್ಲಿ ಆ ವಿಚಾರ ಪ್ರಸ್ತಾಪವಾಗಿ ತಮಗೆ ಆಗಬಹುದಾದ ಮುಖಭಂಗದಿಂದ ತಪ್ಪಿಸಿಕೊಳ್ಳಲು ಪರಂ ಹೀಗೆ ವೈಯಕ್ತಿಕ ಕಾರ್ಯಕ್ರಮದ ನೆಪದಲ್ಲಿ ಗೈರಾಗಿದ್ದಾರೆ.

ಇದಲ್ಲದೇ ಕೆಪಿಸಿಸಿ ಕಾರ್ಯದರ್ಶಿಗಳ ನೇಮಕದಲ್ಲೂ ಮೈಸೂರು-ತುಮಕೂರು ಭಾಗಕ್ಕೆ ಅನ್ಯಾಯವಾಗಿದೆ ಅನ್ನೋ ಮಾತುಗಳು ಕೇಳಿಬಂದಿದ್ದು, ಇದು ಕೂಡ ಅವರ ಮುನಿಸನ್ನು ಹೆಚ್ಚಿಸಿದೆ. ಇನ್ನೊಂದೆಡೆ ಪರಂ ಗೈರಾಗಿರೋದು, ದಿನೇಶ್ ಗುಂಡೂರಾವ್, ಸಿದ್ಧರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್​​ ನಾಯಕರಿಗೆ ಮುಜುಗರ ತಂದಿದೆ. ಕೇವಲ ಪರಂ ಮಾತ್ರವಲ್ಲದೇ ಸಚಿವ ಸಂಪುಟದಲ್ಲಿ ಸ್ಥಾನ ವಂಚಿತ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಭೆಯಿಂದ ದೂರ ಉಳಿದಿದ್ದು, ಇದು ಕೈಪಾಳಯದಲ್ಲಿ ಮೂಡಿರುವ ಬಿರುಕಿಗೆ ಸಾಕ್ಷಿ ಅಂತಿದೆ ರಾಜಕೀಯ ವಲಯ!

Leave a Comment