ರಾಜಕೀಯ ಸಿನೆಮಾ

ಕುಮಾರಣ್ಣನ ಭೇಟಿ ಮಾಡಿದ ಶಿವಣ್ಣ ದಂಪತಿ- ಶಿವಮೊಗ್ಗದಿಂದ ಲೋಕಸಭೆಗೆ ಸ್ಪರ್ಧಿಸ್ಥಾರಾ ಗೀತಾ ಶಿವರಾಜಕುಮಾರ್- ಭೇಟಿ ಹಿಂದಿನ ರಹಸ್ಯವೇನು?

Views:
250

ಈಗಾಗಲೇ ರಾಜ್ಯದಲ್ಲಿ 2019 ರ ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಗಲ್ಲಿಯಿಂದ ದಿಲ್ಲಿಯವರೆಗೆ ರಾಜಕಾರಣದ ಲೆಕ್ಕಾಚಾರಗಳು ಆರಂಭಗೊಂಡಿದ್ದು, ಪ್ರತಿಕ್ಷಣವೂ ಅನಿರೀಕ್ಷಿತ ಬೆಳವಣಿಗೆಗಳಿಂದ ರಾಜಕೀಯ ರಂಗೇರತೊಡಗಿದೆ. ಇಂತಹುದೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕನ್ನಡದ ಹ್ಯಾಟ್ರಿಕ್ ಹಿರೋ ಡಾ.ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಕೇವಲ ಔಪಚಾರಿಕ ಎಂದು ಶಿವಣ್ಣ ದಂಪತಿ ಹೇಳಿಕೊಂಡಿದ್ದರೂ ಈ ಭೇಟಿ ಒಳಗೊಂಡಿರಬಹುದಾದ ರಾಜಕೀಯ ಲೆಕ್ಕಾಚಾರಗಳು ಮಾಧ್ಯಮದ ಕಣ್ಣಿಗೆ ನಿಲುಕಿರೋದಂತು ಸತ್ಯ.

 

ಈ ಹಿಂದಿನ ವಿಧಾನಸಭೆ ಚುನಾವಣೆ ವೇಳೆಯೇ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಮಧುಬಂಗಾರಪ್ಪ ಶಾಸಕರ ಸ್ಥಾನಕ್ಕೆ ಸ್ಪರ್ಧಿಸಿದ್ದ ವೇಳೆ ಸಕ್ರಿಯವಾಗಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಗೀತಾ ಶಿವರಾಜಕುಮಾರ್ ಈ ಊಹೆಗೆ ಬಲತುಂಬಿದ್ದರು. ಇದೀಗ ಚುನಾವಣೆ ಹೊತ್ತಿನಲ್ಲೇ ಗೀತಾ ಶಿವರಾಜಕುಮಾರ್ ಹಾಗೂ ಶಿವಣ್ಣ ಸಿಎಂ ಭೇಟಿ ಮತ್ತೊಮ್ಮೆ ಈ ಲೆಕ್ಕಾಚಾರಕ್ಕೆ ಬಲತುಂಬಿದೆ.
ಶನಿವಾರ ಸಿಎಂ ಕುಮಾರಸ್ವಾಮಿ ಸ್ವಗೃಹದಲ್ಲಿ ಅವರನ್ನು ಭೇಟಿ ಮಾಡಿದ ದಂಪತಿ ಸುಮಾರು ಅರ್ಧಗಂಟೆಗೂ ಅಧಿಕಕಾಲ ಮಾತುಕತೆ ನಡೆಸಿದರು. ಭೇಟಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶಿವಣ್ಣ ಇದು ರಾಜಕೀಯೇತರ ಭೇಟಿ. ಮೈಸೂರಿನಲ್ಲಿರುವ ಪಾರ್ವತಮ್ಮ ರಾಜಕುಮಾರ್ ನಡೆಸುತ್ತಿದ್ದ ಶಾಂತಿಧಾಮ ಅಭಿವೃದ್ಧಿ ಹಾಗೂ ಶಾಲೆಯೊಂದನ್ನು ತೆರೆಯುವ ಕುರಿತು ಮಾತುಕತೆ ನಡೆಯಿತು ಎಂದರು. ಅಲ್ಲದೇ ಗೀತಾ ಚುನಾವಣೆಗೆ ನಿಂತು ಗೆಲ್ಲಬೇಕು ಎಂಬುದು ದೇವರ ಇಚ್ಛೆ ಆದರೇ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮ ಮಾತನಾಡಿದ್ದಾರೆ.

ಹೌದು ಈಗಾಗಲೇ ಲೋಕಸಭೆಯನ್ನು ಸಮ್ಮಿಶ್ರವಾಗಿ ಎದುರಿಸಬೇಕೇ ಬೇಡವೇ ಎಂಬ ಚರ್ಚೆಗಳು ನಡೆದಿದ್ದು, ಒಂದೊಮ್ಮೆ ಮೈತ್ರಿಯಲ್ಲೇ ಚುನಾವಣೆಗೆ ಹೋದರೇ ಕ್ಷೇತ್ರಗಳ ಹಂಚಿಕೆ ಅನಿವಾರ್ಯ. ಇನ್ನು ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಾಗೋಡು ತಿಮ್ಮಪ್ಪನವಿಗೆ ಛಾನ್ಸ್ ಸಿಗಲಿದೆ ಎಂಬ ಮಾತು ಕೇಳಿಬಂದಿದೆಯಾದರೂ ಮಧುಬಂಗಾರಪ್ಪ ಕಾಂಗ್ರೆಸ್​ಗೆ ಈ ಕ್ಷೇತ್ರ ಬಿಟ್ಟುಕೊಡುವುದಕ್ಕೆ ವಿರೋಧಿಸಿದ್ದಾರೆ ಎನ್ನಲಾಗಿದೆ.
ಇನ್ನು ಈಗಾಗಲೇ ಸೋತಿರುವ ಕಾಗೋಡು ತಿಮ್ಮಪ್ಪ, ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂಧಾಗಲು ಇಚ್ಚಿಸುತ್ತಿಲ್ಲ ಎನ್ನಲಾಗಿದೆ. ಹೀಗಾದಲ್ಲಿ ಸಹಜವಾಗಿಯೇ ಜೆಡಿಎಸ್​​ಗೆ ಒಳ್ಳೆಯ ಅವಕಾಶವಿದೆ. ಅಲ್ಲದೇ ಬಿಜೆಪಿ ವಿರುದ್ಧ ಸಮರ್ಥ ಕ್ಯಾಂಡಿಡೇಟ್​ ಒಬ್ಬರ ಅಗತ್ಯವಿರೋದರಿಂದಲೂ ಗೀತಾ ಶಿವರಾಜಕುಮಾರ್ ಸ್ಪರ್ಧೆ ಜೆಡಿಎಸ್​ಗೆ ವರವಾಗಲಿದೆ ಎಂಬ ಲೆಕ್ಕಾಚಾರವೂ ಇದೆ. ಹೀಗಾಗಿ ಈ ಬಗ್ಗೆ ಮಾತುಕತೆಗೆ ಶಿವಣ್ಣ ಹಾಗೂ ಗೀತಾ ಆಗಮಿಸಿದ್ದು, ಗೀತಾ ಸ್ಪರ್ಧೆಗೆ ಇಂಗಿತ ತೋರಿದ್ದು, ಇದಕ್ಕೆ ಕುಮಾರಸ್ವಾಮಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಮಧುಬಂಗಾರಪ್ಪಗೆ ಜೆಡಿಎಸ್​ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತಾದರೂ ಈ ಹುದ್ದೆ ಇದೀಗ ಪ್ರಭಲ ಕುರುಬ ಜನಾಂಗದ ಪಾಲಾಗಿದೆ. ಹೀಗಾಗಿ ಮಧು ಬಂಗಾರಪ್ಪ ಅವರನ್ನು ಸಮಾಧಾನಿಸುವ ನಿಟ್ಟಿನಲ್ಲೂ ಗೀತಾಗೆ ಎಂಪಿ ಟಿಕೇಟ್​ ನೀಡಲಾಗುತ್ತದೆ ಎಂಬುದು ಆಂತರಿಕ ಲೆಕ್ಕಾಚಾರ. ಒಟ್ಟಿನಲ್ಲಿ ಗೀತಾ ಸಕ್ರಿಯ ರಾಜಕಾರಣಕ್ಕೆ ಬರೋದು ಬಹುತೇಕ ಖಚಿತವಾಗಿದೆ. ಒಂದೊಮ್ಮೆ ಗೀತಾಗೆ ಜೆಡಿಎಸ್​​ ಟಿಕೇಟ್​ ಸಿಕ್ಕರೇ ಬಿಜೆಪಿ ಗೆಲುವು ಸುಲಭವಾಗಲಿದೆ ಅನ್ನೋದು ಕಮಲಪಾಳಯದ ಲೆಕ್ಕಾಚಾರವಾದರೇ, ಕಾಂಗ್ರೆಸ್​ ವಲಯದಲ್ಲಿ ಅಸಮಧಾನ ಮತ್ತೊಮ್ಮೆ ಭುಗಿಲೇಳೋದು ಪಕ್ಕಾ ಎನ್ನಲಾಗ್ತಿದೆ. ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಈ ಲೆಕ್ಕಾಚಾರ ಯಾವ ರಿಸಲ್ಟ್ ಕೊಡುತ್ತೆ ಕಾದುನೋಡಬೇಕಿದೆ.

Leave a Comment