ರಾಜಕೀಯ ಸುದ್ದಿಗಳು

ಕೊನೆಗೂ ಜಮೀರ್ ಹೇಳಿದ್ದೇ ನಡೀತು- ಇದು ಮೈತ್ರಿ ಸರ್ಕಾರದ ಗಿಫ್ಟ್ (ಇದು ಸಮಗ್ರ Exclusive)

ರಾಜ್ಯ ವಿಧಾನಸಭೆ ಚುನಾವಣೆ ವೇಳೆಯಲ್ಲಿ ರಾಜಕೀಯ ಚಟುವಟಿಕೆಗಳು ಗಮನಸೆಳೆಯೋದಕ್ಕಿಂತ ಜಾಸ್ತಿ ಗಮನ ಸೆಳೆದಿದ್ದು, ಚರ್ಚೆಗೆ ಗ್ರಾಸವಾಗಿದ್ದು ಹಾಲಿ ಸಚಿವ ಜಮೀರ್ ಅಹ್ಮದ್ ಖಾನ್‌ಭಾಷಣ. ಹೀಗೆ ಮಾತಿನಿಂದಲೇ ವಿವಾದದ ಕಿಡಿ ಹುಟ್ಟಿಸುತ್ತಿದ್ದ ಜಮೀರ್ ಸಮ್ಮಿಶ್ರ ಸರ್ಕಾರದ ಶತಾಯ-ಗತಾಯ ಸಚಿವ ಪಟ್ಟ ಗಿಟ್ಟಿಸಿರೋದಂತೂ ಅವರ ಚಾಣಾಕ್ಷ ರಾಜಕೀಯ ನಡೆಗೆ ಸಾಕ್ಷಿ. ಇಂತಿಪ್ಪ ಜಮೀರ್ ಅಹ್ಮದ್ ಸಮ್ಮಿಶ್ರ ಸರ್ಕಾರದಲ್ಲೂ ತಮ್ಮ‌ ಹಟವನ್ನೇ ಸಾಧಿಸಿದ್ದಾರೆ. ಹೌದು ತಮಗೆ ಫಾರ್ಚೂನರ್ ಕಾರೇ ಬೇಕೆಂದು‌ ಪಟ್ಟು ಹಿಡಿದಿದ್ದ ಜಮೀರ್ ಕೊನೆಗೂ ಅದನ್ನೇ ಗಿಟ್ಟಿಸಿಕೊಂಡಿದ್ದಾರೆ.

ಈ ಹಿಂದೆ ಜೆಡಿಎಸ್ ನಿಂದ ಬಂಡಾಯವಾಗಿ ಹೊರಬಿದ್ದು ಕಾಂಗ್ರೆಸ್ ಪಾಳಯ ಸೇರಿದ ಜಮೀರ್ ಅಹ್ಮದ್ ಕುಮಾರಸ್ವಾಮಿಯನ್ನು ಹಿಗ್ಗಾಮುಗ್ಗಾ ಟೀಕಿಸಿಯೇ ರಾಜ್ಯದ ಗಮನ ಸೆಳೆದಿದ್ದರು. ಎಲೆಕ್ಷನ್‌ ಗೆಲ್ಲದಿದ್ದರೇ ಕತ್ತು ಕತ್ತರಿಸಿಕೊಳ್ಳುತ್ತೇನೆ ಎಂದು ಶಪಥ‌ ಮಾಡಿದ್ದ ಜಮೀರ್ ಅಹ್ಮದ್ ಖಾನ್, ಕುಮಾರಸ್ವಾಮಿ ವಿಕ್ಸ್ ಮೆತ್ತಿದ ಟವೇಲ್ ಕಣ್ಣಿಗೊತ್ತಿಕೊಂಡು ಕಣ್ಣೀರಿಡುತ್ತಾರೆ. ಅವರ ಅಳೋದು ನಾಟಕ‌ ಎನ್ನುವ ಮೂಲಕ ಕುಮಾರಸ್ವಾಮಿ ‌ಕೆಂಗಣ್ಣಿಗೆ ಗುರಿ ಯಾಗಿದ್ದರು. ಆದರೂ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಪಡೆದ ಜಮೀರ್ ಕೊನೆಗೂ ಸಾವಿರ ಪ್ರಯತ್ನಗಳ ಬಳಿಕ‌ ಸಚಿವ ಸಂಪುಟ ಸೇರಿ ಆಹಾರ ಮತ್ತು‌ನಾಗರೀಕ‌ ಪೊರೈಕೆ ಸಚಿವರಾದರು.

 

ಆದರೇ‌ ಸಚಿವರಾಗುತ್ತಿದ್ದಂತೆ ತಮ್ಮ ವರಸೆ ಆರಂಭಿಸಿದ ಜಮೀರ್, ತಮಗೆ ಮಾಜಿ ಸಿಎಂ ಸಿದ್ಧರಾಮಯ್ಯ ಬಳಸುತ್ತಿದ್ದ ಫಾರ್ಚೂನರ್ ಕಾರೇ ಬೇಕೆಂದು ಪಟ್ಟು ಹಿಡಿದಿದ್ದರು. ಆದರೇ ಜಮೀರ್ ಈ ಬೇಡಿಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಯಾವುದೇ ಪ್ರತಿಕ್ರಿಯೆ‌ ನೀಡಿರಲಿಲ್ಲ. ಹೀಗಾಗಿ ಜಮೀರ್ ಸರ್ಕಾರಿ ಕಾರನ್ನೇ ಬಳಸದೇ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.

ಇದೀಗ‌ ಎಲ್ಲ‌ ಒತ್ತಡಕ್ಕೆ‌ ಮಣಿದ ಸರ್ಕಾರ ಜಮೀರ್ ಅಹ್ಮದ್ ಖಾನ್ ಗೆ ಕೊನೆಗೂ‌ ಇನ್ನೋವಾ ಬದಲು‌ ಫಾರ್ಚೂನರ್ ಕಾರು ಒದಗಿಸಿದೆ. ಕಾರು ಬರುತ್ತಿದ್ದಂತೆ ತಮ್ಮ ವರಸೆ ಬದಲಿಸಿರುವ ಜಮೀರ್ ಅಹ್ಮದ್ ಖಾನ್ ನಾನು ಕಾರ್ ಕೇಳಿಯೇ ಇರಲಿಲ್ಲ ಎಂದು ತಿಪ್ಪೆಸಾರಿಸುವ ಪ್ರಯತ್ನ ನಡೆಸಿದ್ದಾರೆ. ಒಟ್ಟಿನಲ್ಲಿ ಜಮೀರ್ ಸರ್ಕಾರದಲ್ಲಿ ಎಲ್ಲದಕ್ಕೂ ಬ್ಲಾಕ್ ಮೇಲ್‌ ತಂತ್ರ ಅನುಸರಿಸುತ್ತಾರೆ ಎಂಬುದಕ್ಕೆ ಈ ಕಾರ್ ಪ್ರಕರಣ ಸಾಕ್ಷಿಯಾಗಿರೋದಂತು ನಿಜ.

Leave a Comment