ಸಿನೆಮಾ

ಮೂರು ತಿಂಗಳಲ್ಲಿ ಮನೆ ಖಾಲಿ ಮಾಡಿ -ರಾಕಿಂಗ್​ ಸ್ಟಾರ್​ ಯಶ್​ಗೆ ಹೈಕೋರ್ಟ್​ ಆದೇಶ!

ಡಿಸೆಂಬರ್​ ವೇಳೆಗೆ ಮುದ್ದಾದ ಮಗು ಹಾಗೂ ತಮ್ಮ ಬಹುನೀರಿಕ್ಷಿತ ಚಿತ್ರ ರಿಲೀಸ್​ ಹೀಗೆ ಡಬ್ಬಲ್ ಧಮಾಕಾ ಖುಷಿಯಲ್ಲಿರೋ ರಾಕಿಂಗ್ ಸ್ಟಾರ್ ಯಶ್​ ಅದೃಷ್ಟ ಯಾಕೋ ಕೈಕೊಟ್ಟಂತಿದೆ. ಯಶ್​ರನ್ನು ಬಿಟ್ಟು ಬಿಡದಂತೆ ಕಾಡುತ್ತಿದ್ದ ಬಾಡಿಗೆ ಮನೆ ವಿವಾದದಲ್ಲಿ ಹೈಕೋರ್ಟ್​​ ರಾಕಿಂಗ್​ ಸ್ಟಾರ್​ ಯಶ್​ ಕುಟುಂಬಕ್ಕೆ ಸಖತ್ ಶಾಕ್ ನೀಡಿದ್ದು, ಬಾಕಿ ಹಣ ಪಾವತಿಸಬೇಕು ಇಲ್ಲ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡಬೇಕೆಂಬ ಖಡಕ್ ಆದೇಶ ನೀಡಿದೆ.

 

ಯಶ್​ಗೆ ಅದೃಷ್ಟ ತಂದು ಕತ್ರಿಗುಪ್ಪೆಯಲ್ಲಿರೋ ಬಾಡಿಗೆ ಮನೆಯನ್ನ ಯಶ್​ ಬಿಡೋದಿಲ್ಲ ಅಂತಿದ್ದರೇ ಅದರ ಓನರ್​ ಅದನ್ನು ನಾವು ಇನ್ಮುಂದೆ ನಿಮಗೆ ಬಾಡಿಗೆಗೆ ಕೊಡಲ್ಲ ಅಂತಿದ್ದರು. ಮೂರ್ನಾಲ್ಕು ವರ್ಷಗಳ ಈ ಹಗ್ಗ ಜಗ್ಗಾಟ ಪೊಲೀಸ್ ಠಾಣೆ, ಮಧ್ಯಸ್ಥಿಗೆ ರಾಜಿಸಂಧಾನ ಎಲ್ಲ ದಾಟಿ ಕೊನೆಗೂ ಸೆಷನ್ಸ್​ ನ್ಯಾಯಾಲಯದ ಮೆಟ್ಟಿಲೇರಿತ್ತು.

ಎರಡು ಪಾರ್ಟಿ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಯಶ್​ಗೆ ಬಾಕಿ ಇರುವ ಬಾಡಿಗೆ ಹಣವನ್ನು ಪಾವತಿಸುವಂತೆ ಹಾಗೂ ಮನೆಯನ್ನು ನಿಗದಿತ ಅವಧಿಯಲ್ಲಿ ಖಾಲಿ ಮಾಡಿ ಮಾಲೀಕರಿಗೆ ನೀಡುವಂತೆ ಆದೇಶಿಸಿತ್ತು. ಆದರೇ ಇದಕ್ಕೆ ಜಗ್ಗದ ಯಶ್​ ಕುಟುಂಬ ಹೈಕೋರ್ಟ್​ ಮೆಟ್ಟಿಲೇರಿತ್ತು. ಇದೀಗ ಪ್ರಕರಣದ ವಿಚಾರಣೆ ಬಳಿಕ ಆದೇಶ ಹೊರಡಿಸಿರುವ ಹೈಕೋರ್ಟ್​​ ಬಾಕಿ ಇರುವ 23 ಲಕ್ಷ ಬಾಡಿಗೆ ಪಾವತಿಸಿ ಮಾರ್ಚ್​​ ತನಕ ಇರಿ ಇಲ್ಲ ಡಿಸೆಂಬರ್​ಗೆ ಮನೆ ಖಾಲಿ ಮಾಡಿ ಎಂದು ಖಡಕ್ ಆದೇಶ ನೀಡಿದೆ.

ಇದರಿಂದ ನಟ ಯಶ್​ ಹಾಗೂ ಹೈಕೋರ್ಟ್​ ಮೆಟ್ಟಿಲೇರಿದ್ದ ಅವರ ತಾಯಿ ಪುಷ್ಪಾಅವರಿಗೆ ಮುಖಭಂಗವಾದಂತಾಗಿದೆ. ಯಶ್​​ ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಕತ್ರಿಗುಪ್ಪೆಯ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆ ಬಳಿಕ ಒಂದೊಂದಾಗಿ ಯಶ್​ ಚಿತ್ರಗಳು ಸೂಪರ್​ ಹಿಟ್​ ಆಗಿದ್ದರಿಂದ ಯಶ್​ ಆ ಮನೆ ತಮಗೆ ಅದೃಷ್ಟ ಎಂದು ಭಾವಿಸಿದ್ದು ಬಿಟ್ಟು ಕೊಡಲು ಸಿದ್ಧವಿಲ್ಲ. ಆದರೇ ಅಗ್ರಿಮೆಂಟ್ ಅವಧಿ ಮುಗಿದಿದ್ದರು ಮನೆ ಬಿಟ್ಟು ಕೊಡುತ್ತಿಲ್ಲ ಹಾಗೂ ಸರಿಯಾಗಿ ಮನೆ ಬಾಡಿಗೆ ನೀಡುತ್ತಿಲ್ಲ ಎಂದು ಮನೆ ಮಾಲೀಕರು ಹಲವಾರು ಭಾರಿ ಆರೋಪಿಸಿದ್ದರು.

ಇನ್ನು ಈ ಭಾರಿ ಡಿಸೆಂಬರ್​ ಯಶ್​ಗೆ ಅತಿ ಪ್ರಾಮುಖ್ಯವಾಗಿದ್ದು, ಅವರ ಬಹುನೀರಿಕ್ಷಿತ ಚಿತ್ರ ಕೆಜಿಎಫ್​ ತೆರೆಗೆ ಬರಲಿದೆ. ಅಷ್ಟೇ ಅಲ್ಲ ಯಶ್​ ಹಾಗೂ ರಾಧಿಕಾ ಅವರ ಪ್ರೀತಿಯ ಮಗುವು ಈ ಭೂಮಿಗೆ ಬರಲಿದೆ. ಈ ಮಧ್ಯೆ ಯಶ್​ಗೆ ಈ ಬಾಡಿಗೆ ಮನೆ ವಿಚಾರ ತಲೆನೋವಾಗಿ ಪರಿಣಮಿಸಿದ್ದು, ಡಿಸೆಂಬರ್​​ ವೇಳೆಗೆ ಯಶ್​ ತಮ್ಮ ಅದೃಷ್ಟಮನೆಯನ್ನ ಕಳೆದುಕೊಳ್ತಾರಾ ಅಥವಾ ಉಳಿಸಿಕೊಳ್ತಾರಾ ಕಾದುನೋಡಬೇಕಿದೆ.

Leave a Comment