ರಾಜಕೀಯ

ಕುಮಾರಣ್ಣ ಮತ್ತು ಯು ಟಿ ಖಾದರ್ ಜೋಡಿ – ಮರಳು ಮರಳಾಗಿ ಅಮ್ಮ ಮಾಡಿದ ತುಪ್ಪದ ತರಹನೇ ಇದೆ

ಜಿ ಆರ್ ಬಿ ತುಪ್ಪದ ಜಾಹೀರಾತು ನೋಡಿರಬಹುದು. ಮರಳು ಮರಳಾಗಿ ಅಮ್ಮ ಮಾಡಿದ ತುಪ್ಪದ ತರಹನೇ ಇದೆ ಎಂಬುದು ಜಾಹೀರಾತಿನ ಫೇಮಸ್ ಸ್ಲೋಗನ್. ಸದ್ಯ ಕರಾವಳಿಯ ಮರಳು ಯು ಟಿ ಖಾದರ್ ಮತ್ತು ಸಿಎಂ ಕುಮಾರಸ್ವಾಮಿಗೆ ತುಪ್ಪವಾಗಿ ಕಾಣತೊಡಗಿದೆ. ಯಾವಾಗ ಗಂಟಲಲ್ಲಿ ಸಿಕ್ಕಾಕ್ಕೊಂಡ ಬಿಸಿ ತುಪ್ಪವಾಗುತ್ತೋ ಗೊತ್ತಿಲ್ಲ.

 

ವಿಧಾನಸೌಧದ ಮೂರನೇ ಮಹಡಿಯಲ್ಲಿ ಮಂಗಳವಾರ ಮಹತ್ವದ ಸಭೆ ನಡೆಯಿತು. ರಾಜ್ಯದ ಬರವೋ, ಜಲಪ್ರಳಯದ ಹಾನಿಯ ಬಗ್ಗೆಯೋ ಪ್ರಗತಿಪರಿಶೀಲನಾ ಸಭೆ ಇರಬಹುದು ಎಂದುಕೊಂಡರೆ ಅದು ತಪ್ಪು.

ಕರಾವಳಿಯಲ್ಲಿ ಡಿವೈಎಫ್ ಐ ಯುವ ಸಂಘಟನೆ ನೇತೃತ್ವದಲ್ಲಿ ಟೋಲ್ ಗೇಟ್ ವಿರೋಧಿಸಿ ಪಾದಯಾತ್ರೆ ನಡೆಯುತ್ತಿದೆ. ಟೋಲ್ ಗೇಟ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಡೆದ ಸಭೆ ಎಂದುಕೊಂಡರೆ ಅದು ನಿಮ್ಮ ಮೂರ್ಖತನ. ಇನ್ನು ನೆನ್ನೆ, ಮೊನ್ನೆ ಮತೀಯ ಹೆಸರಿನಲ್ಲಿ ರಕ್ತ ಹರಿದಿದ್ದು, ಅದನ್ನು ನಿಲ್ಲಿಸಲು ನಡೆಸಿದ ಸಭೆ ಎಂದುಕೊಂಡರೆ ಅದು ಶತಮೂರ್ಖತನ. ಮುಖ್ಯಮಂತ್ರಿ ಮತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕರಾವಳಿ ಜನಪ್ರತಿನಿಧಿಗಳ ಜರೂರು ಸಭೆ ನಡೆದಿದ್ದು, ಮರಳು ಮಾಫಿಯಾಗಳಿಗೆ ಪೊಲೀಸರು ತೊಂದರೆ ಕೊಡಬಾರದು ಎಂದು ದಕ್ಷಿಣ ಕನ್ನಡದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲು.

ಸಿಎಂ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕರಾವಳಿ ಭಾಗದ ಶಾಸಕರ ಸಭೆ ನಡೆಸಲಾಯ್ತು. ಎರಡೂ ಪಕ್ಷದ ಶಾಸಕರು ಪಕ್ಷ ಭೇದ ಮರೆತು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯಲ್ಲಿ ಅಕ್ಟೋಬರ್ 15ರೊಳಗಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮರಳು ಗಣಿಗಾರಿಕೆ ನಿಯಮಾವಳಿ ಸಡಿಲಗೊಳಿಸಲು ತೀರ್ಮಾನ ಕೈಗೊಳ್ಳಲಾಯ್ತು. ಸಿಆರ್ ಝಡ್ ವ್ಯಾಪ್ತಿಯಲ್ಲೂ ಮರಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಇದೇ ಸಂಧರ್ಭದಲ್ಲಿ ಸೂಚನೆ ನೀಡಿದರು.

ಒಂದು ತಿಂಗಳಲ್ಲಿ ನಾನ್ ಸಿಆರ್ ಝಡ್ ಪ್ರದೇಶದಲ್ಲೂ ಸರ್ವೆ ಮುಗಿಸಿ ಮರಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದಲ್ಲದೆ, ಸಣ್ಣ ಪ್ರಮಾಣದಲ್ಲಿ ಟ್ರಾಕ್ಟರ್, ಟೆಂಪೋಗಳಲ್ಲಿ ಮರಳು ಸಾಗಣೆ ಮಾಡುವವರಿಗೆ ಕಿರುಕುಳ ನೀಡದಂತೆ ಪೊಲೀಸರಿಗೆ ಮೌಖಿಕ ಆದೇಶ ನೀಡಲಾಯ್ತು.

ಈಗಾಗಲೇ ಕರಾವಳಿಯಲ್ಲಿ ಮಳೆ ನಿಂತು ಹದಿನೈದೇ ದಿನಕ್ಕೆ ನದಿಗಳು ಬತ್ತಿ ಹೋಗಿದೆ. ಜಲಮೂಲಗಳ ಮೇಲಿನ ದಾಳಿಯೇ ಇದಕ್ಕೆ ಕಾರಣ. ಮತ್ತೆ ಸಿಆರ್ ಝಡ್ ವಲಯದಲ್ಲೂ ಮರಳುಗಾರಿಗೆ ಅನುಮತಿ ನೀಡಿದ್ರೆ ಕರಾವಳಿ ನಾಶವಾಗುವುದು ಖಚಿತ. ಇದಲ್ಲದೆ ಕರಾವಳಿಯಲ್ಲಿ ಮತ್ತೆ ಮರಳು ಮಾಫಿಯಾ ಚಿಗುರು ಕಾಣಲಿದೆ. ಮರಳು ಮಾಫಿಯಾದ ಆರ್ಭಟ ಹೆಚ್ಚಾಗಲಿದ್ದು ಅದು ಯು ಟಿ ಖಾದರ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ.

Leave a Comment