ರಾಜಕೀಯ

ಕೈ-ತೆನೆ ಮೈತ್ರಿಯ ಮೊದಲ ಒಪ್ಪಂದ- ಜಯನಗರ ಕೈಗೆ- ಆರ್.ಆರ್.ನಗರ ತೆನೆಗೆ- ಸುಮ್ಮನಿರ್ತಾರಾ ಮುನಿರತ್ನ?!

Views:
66

ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಲು ಕಾಂಗ್ರೆಸ್​ ಮತ್ತು ಜೆಡಿಎಸ್​​ ಪಕ್ಷಗಳು ಮಾಡಿಕೊಂಡಿರುವ ಮೈತ್ರಿ ರಾಜ್ಯದಲ್ಲಿ ನಡೆಯಲಿರುವ ಮತ್ತೆರಡು ಚುನಾವಣೆಗಳಲ್ಲೂ ಮುಂದುವರೆಯುವ ಮುನ್ಸೂಚನೆ ಲಭ್ಯವಾಗಿದೆ. ಹೌದು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಲಿರುವ ಬೆನ್ನಲ್ಲೇ ನಿನ್ನೆ ಜೆಡಿಎಸ್​-ಕಾಂಗ್ರೆಸ್​ ಮಹತ್ವದ ಸಭೆ ನಡೆಸಿ ಸೀಟುಗಳ ಹಂಚಿಕೆ ಮಾಡಿಕೊಂಡಿದೆ.

    
ತಡರಾತ್ರಿ ನಗರದಲ್ಲಿ ಜೆಡಿಎಸ್​-ಕಾಂಗ್ರೆಸ್ ಸಭೆ ನಡೆಸಿದ್ದು, ಸಭೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ, ಡಿಕೆಶಿ,ಗುಲಾಂನಬಿ ಆಜಾದ್​, ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಗರದಲ್ಲಿ ನಡೆದಿರುವ ಎರಡು ಚುನಾವಣೆಗಳಿಗೆ ಅಗತ್ಯವಿರುವ ಒಪ್ಪಂದವನ್ನು ಜೆಡಿಎಸ್​-ಕಾಂಗ್ರೆಸ್​ ಮಾಡಿಕೊಂಡಿದೆ.


ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಕುಮಾರ ಚುನಾವಣೆಗೆ ಕೆಲವೇ ದಿನ ಇರುವಾಗ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಜಯನಗರದಲ್ಲಿ ಚುನಾವಣೆ ಮುಂದೂಡಲಾಗಿತ್ತು. ಇದೀಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಸೌಮ್ಯ ರೆಡ್ಡಿಗೆ ಬೆಂಬಲಿಸಲು ಜೆಡಿಎಸ್​ ನಿರ್ಧರಿಸಿದೆ. ಇದರಿಂದ ಸೌಮ್ಯ ರೆಡ್ಡಿ ಗೆಲುವು ಸುಲಭವಾಗಲಿದೆ ಅನ್ನೋದು ಕಾಂಗ್ರೆಸ್ ಲೆಕ್ಕಾಚಾರ.


ಇನ್ನು ಬೆಂಗಳೂರಿನ ಪ್ರತಿಷ್ಠೆಯ ಕಣವಾಗಿರುವ ಆರ್.ಆರ್.ನಗರ ಚುನಾವಣೆಯಲ್ಲಿ ಬೇಷರತ್ತಾಗಿ ಜೆಡಿಎಸ್​ ಬೆಂಬಲಿಸಲು ಕಾಂಗ್ರೆಸ್ ನಿರ್ಧರಿಸಿದೆ. ಚುನಾವಣೆಗೆ ಕೆಲ ದಿನಗಳಿರುವಾಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಅವರಿಗೆ ಸೇರಿದ್ದು ಎನ್ನಲಾದ ಅಪಾರ ಪ್ರಮಾಣದ ಓಟರ್ ಐಡಿಗಳು ಪ್ರತ್ಯಕ್ಷವಾಗಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಚುನಾವಣೆ ಮುಂದೂಡಿತ್ತು. ಅಲ್ಲದೇ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಈ ಕ್ಷೇತ್ರದಲ್ಲಿ ಜೆಡಿಎಸ್​ ಬೆಂಬಲಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಶಾಸಕರಾಗಿದ್ದ ಮುನಿರತ್ನ ವಿರುದ್ಧ ಅಪಾರ ಪ್ರಮಾಣದಲ್ಲಿ ಜನ ವಿರೋಧ ಹಾಗೂ ಟೀಕೆಗಳು ಕೇಳಿಬಂದಿದ್ದರೂ ಕಾಂಗ್ರೆಸ್​ ತಲೆಕೆಡಿಸಿಕೊಂಡಿರಲಿಲ್ಲ. ಆದರೇ ಈಗ ತೀವ್ರಮುಜುಗರ ಎದುರಾಗೋದರಿಂದ ಮುನಿರತ್ನ ಕಣಕ್ಕಿಳಿಸುವ ನಿರ್ಧಾರ ಬಿಟ್ಟು ಮೈತ್ರಿ ಬಳಿಕ ಆರ್.ಆರ್.ನಗರದ ಜೆಡಿಎಸ್​ ಅಭ್ಯರ್ಥಿಯಾಗಿರುವ ಜಿ.ಎಚ್​.ರಾಮಚಂದ್ರ ಬೆಂಬಲಿಸಲು ಕೈ ಪಾಳಯ ನಿರ್ಧರಿಸಿದೆ. ಒಟ್ಟಿನಲ್ಲಿ ಚುನಾವಣೋತ್ತರ ಮೈತ್ರಿಗಳು ಚುನಾವಣೆಗಳ ಮೇಲೂ ಪರಿಣಾಮ ಬೀರುತ್ತಿದ್ದು, ಟಿಕೇಟ್ ಕಳೆದುಕೊಳ್ಳೋ ಮುನಿರತ್ನ ಮುಂದಿನ ನಡೆ ಕುತೂಹಲ ಮೂಡಿಸಿದೆ.

Leave a Comment