ರಾಜ್ಯ 2019 ರ ಲೋಕಸಭಾ ಚುನಾವಣೆಗೆ ರಾಜಕೀಯ ಲೆಕ್ಕಾಚಾರ ಆರಂಭಿಸಿದ್ದರೇ ಮಂಡ್ಯದಲ್ಲಿ ಮಾತ್ರ ಒಂದು ರೀತಿ ಅಸಮಧಾನ, ಆತಂಕ ಮನೆ ಮಾಡಿದಂತಿದೆ. ಅದ್ಯಾಕೋ ಗೊತ್ತಿಲ್ಲ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಕುಂತಲ್ಲಿ-ನಿಂತಲ್ಲಿ ಚರ್ಚೆ ಆರಂಭಿಸಿದ್ದು, ಸಕ್ಕರೆ ನಾಡು ಕೈ ಪಾಳಯದ ಕೈಜಾರಿ ತೆನೆಹೊತ್ತವರ ಪಾಲಾಗುತ್ತೆ ಅನ್ನೋ ಮಾತು ಕೇಳಿಬರತೊಡಗಿದೆ.
ಹೌದು ಶತಾಯ- ಗತಾಯ ದೇಶದಲ್ಲಿ ಎನ್ಡಿಎ ಉರುಳಿಸಿ ಅಧಿಕಾರ ಹಿಡಿಯುವ ಕನಸಿನಲ್ಲಿರುವ ಕಾಂಗ್ರೆಸ್ ಮುಕ್ತವಾಗಿ ಮೈತ್ರಿಯತ್ತ ಕೈಚಾಚಿದೆ. ಹೀಗಾಗಿ ರಾಜ್ಯದಲ್ಲಿ ಅತ್ಯಂತ ಹೆಚ್ಚು ಮತ ಪಡೆದರೂ ಬಿಜೆಪಿಯನ್ನು ವಿರೋಧ ಪಕ್ಷದ ಕುರ್ಚಿಗೆ ತಳ್ಳಿ ಕಾಂಗ್ರೆಸ್ ಜೆಡಿಎಸ್ ಜೊತೆ ಕೈಜೋಡಿಸಿ ಅಧಿಕಾರ ಹಿಡಿದಿದೆ. ಅಷ್ಟೇ ಅಲ್ಲ ಲೋಕಸಭೆ ಚುನಾವಣೆಗೂ ರಾಜ್ಯದಲ್ಲಿ ಮೈತ್ರಿ ಮುಂದುವರೆಸುವ ಲೆಕ್ಕಾಚಾರಗಳು ಆರಂಭವಾಗಿದೆ.
ಹೀಗಿರುವಾಗಲೇ ಇದೀಗ ಕೈ ನಾಯಕರಿಲ್ಲದೇ ಅನಾಥವಾಗಿರುವ ಮಂಡ್ಯದ ಮೇಲೆ ಜೆಡಿಎಸ್ ಕಣ್ಣು ಬಿದ್ದಿದೆ. ಇದು ಅಲ್ಲಿನ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗಿದೆ. ಮೈತ್ರಿ ಮುಂದುವರೆಸಲು ಕೆಲ ಲೋಕಸಭಾ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್ ಕೇಳಿದೆ. ಆ ಲಿಸ್ಟ್ನಲ್ಲಿ ಮಂಡ್ಯದ ಹೆಸರಿದೆ. ಇದಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿದೆ ಎಂಬ ಮಾತು ಕೇಳಿಬಂದಿದೆ.
ಹೀಗಾಗಿ ಜೆಡಿಎಸ್ನಿಂದ ಪ್ರಭಾವಿ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುವ ಮೂಲಕ ತಮ್ಮ ಎಂಪಿಗಳ ಸಂಖ್ಯೆ ಹೆಚ್ಚಿಸುವ ಕನಸು ಜೆಡಿಎಸ್ ಕಣ್ಣಲ್ಲಿದೆ. ಈ ಮಧ್ಯೆ ರಮ್ಯ ಚುನಾವಣೆ ಸೋತ ಬಳಿಕ ರಮ್ಯದತ್ತ ಮುಖ ಮಾಡೋದನ್ನೇ ಮರೆತು ಬಿಟ್ಟಿದ್ದಾರೆ. ಕಾರ್ಯಕರ್ತರ ಕಷ್ಟ ಕೇಳೋದಿರಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕೋಕೆ ಬಂದಿಲ್ಲ. ಹೀಗಾಗಿ ಊರಿಗೊಬ್ಬಳೇ ಪದ್ಮಾವತಿ ನಮ್ಮನ್ನು ಮರೆತೇ ಬಿಟ್ಟರು ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ರೆಬೆಲ್ ಸ್ಟಾರ್ ಅಂಬರೀಶ್, ಬಹುತೇಕ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದು, ಮಂಡ್ಯವನ್ನೇ ಮರೆತು ಅವರದೇ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಹೀಗಾಗಿ ಮಂಡ್ಯ ಕಾಂಗ್ರೆಸ್ ಒಂದು ರೀತಿಯಲ್ಲಿ ಮಾಲೀಕನಿಲ್ಲದ ಮನೆಯಂತಾಗಿದ್ದು, ಇದೇ ಸೂಕ್ತ ಸಮಯವೆಂದು ಅರಿತ ಜೆಡಿಎಸ್ ತಮ್ಮ ಬೇಳೆ ಬೇಯಿಸಿಕೊಳ್ಳಲು ಪೀಠಿಕೆ ಹಾಕಿದೆ.
ಇನ್ನು ಸ್ಥಳೀಯವಾಗಿ ಕಾಂಗ್ರೆಸ್ನ ಬೆನ್ನೆಲುಬಾಗಿದ್ದ ನಾಯಕರು ಕೂಡ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿದ್ದಾರೆ. ಕಾಂಗ್ರೆಸ್ನಲ್ಲೇ ಇದ್ದು ಬಹಿರಂಗವಾಗಿಯೇ ರಮ್ಯ ಸೋಲಿಗೆ ಮುನ್ನುಡಿ ಬರೆದಿದ್ದ ಶಿವರಾಮೇಗೌಡರು ಕೂಡ ಈಗ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳನ್ನ ಕೊಡುಗೆಯಾಗಿ ಕೊಟ್ಟ ಮಂಡ್ಯ ಕಾಂಗ್ರೆಸ್ ಈಗ ಅನಾಥವಾದಂತಾಗಿದೆ.
ಇನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಮಂಡ್ಯವನ್ನು ಬಳಸಿಕೊಂಡು ಬಿಸಾಡಿದ ಮಾಜಿ ಸಂಸದೆ ರಮ್ಯ ಸೇರಿ ಕೈಪಾಳಯದ ನಾಯಕರ ಮೇಲೆ ಈಗ ಇಲ್ಲಿನ ಜನರಿಗೆ ಮೊದಲಿನಂತ ವಿಶ್ವಾಸ ಪ್ರೀತಿಯೂ ಉಳಿದಿಲ್ಲ ಅನ್ನೋದು ಈಗ ಎಲ್ಲರಿಗೂ ಗೊತ್ತಿರುವ ಸತ್ಯ. ಒಟ್ಟಿನಲ್ಲಿ ಮೈತ್ರಿ ಸಂಕಟಕ್ಕೆ ಕಾಂಗ್ರೆಸ್ ಮಂಡ್ಯವನ್ನು ಜೆಡಿಎಸ್ಗೆ ತಾನೇ ಕೈಎತ್ತಿ ದಾನ ಮಾಡುವ ಸ್ಥಿತಿ ಎದುರಾಗಿದೆ.