ರಾಜಕೀಯ ಸುದ್ದಿಗಳು

ರಾಮನಗರದಲ್ಲಿ ರಾಮಾಯಣ ಪ್ರಾರಂಭ – ಉಪಚುನಾವಣೆ ಬಳಿಕ ಎಚ್ ಡಿಕೆ ಕುಟುಂಬದಲ್ಲಿ ನಡೆಯಲಿದೆ ಯುದ್ದ

ರಾಮನಿಗೆ ಪಟ್ಟಾಭಿಷೇಕ ಮಾಡೋದಾದ್ರೆ ಭರತನಿಗೆ ಯಾಕೆ ಪಟ್ಟಾಭಿಷೇಕ ಮಾಡಬಾರದು ಎಂದು ಕೈಕೇ ದಶರಥನನ್ನು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯೇ ಮುಂದೆ ವನವಾಸ, ಲಂಕಾದಹನ, ಯುದ್ದಕ್ಕೆ ಕಾರಣವಾಯ್ತು. ಇದೀಗ ಇದೇ ಪ್ರಶ್ನೆ ದೇವೇಗೌಡರ ಕುಟುಂಬದಲ್ಲೂ ಕೇಳೋ ಸಾಧ್ಯತೆ ಇದೆ. ಅದಕ್ಕೆ ಕಾರಣ ರಾಮನಗರ !

 

ಹೌದು. ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ‘ನನ್ನ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಅಭ್ಯರ್ಥಿಗಳಾಗಿ ಕೇಳಿಬರುತ್ತಿದೆ’ ಎಂದರು.

 

‘ರಾಮನಗರದ ಉಪ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

 

ನಿಮಗೆ ನೆನಪಿರಬಹುದು. ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡಬೇಕು ಎಂದು ಎಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಹೇಳಿದ್ದರು. ಇಷ್ಟಕ್ಕೆ ಸುಮ್ಮನಾಗದ ಭವಾನಿ ರೇವಣ್ಣ, ಆರ್ ಆರ್ ನಗರದಲ್ಲಿ ಪ್ರಜ್ವಲ್ ಗೆ ಟಿಕೆಟ್ ಕನ್ಫರ್ಮ್ ಆಗಿದೆ ಎಂದಿದ್ದರು.

ಆಗ ಮಧ್ಯ ಪ್ರವೇಶ ಮಾಡಿದ್ದ ಎಚ್ ಡಿ ದೇವೇಗೌಡ, ನಮ್ಮ ಕುಟುಂಬದ ಇಬ್ಬರನ್ನು ಹೊರತುಪಡಿಸಿ ಇನ್ಯಾರಿಗೂ ಟಿಕೆಟ್ ಇಲ್ಲ. ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಸ್ಪರ್ಧಿಸುತ್ತಾರೆ. ನಿಖಿಲ್, ಪ್ರಜ್ವಲ್, ಅನಿತಾ, ಭವಾನಿಗೆ ಟಿಕೆಟ್ ಇಲ್ಲ” ಎಂದಿದ್ದರು.

ಇದೀಗ ರಾಮನಗರಕ್ಕೆ ಎಚ್ ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಅಥವಾ ನಿಖಿಲ್ ಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಭವಾನಿ ಮತ್ತು ಪ್ರಜ್ವಲ್ ರೇವಣ್ಣಗೆ ವಂಚನೆಯಾಗುತ್ತಿರುವ ಬಗ್ಗೆ ಚರ್ಚೆ ನಡೆದೇ ನಡೆಯುತ್ತದೆ.

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ, ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ನಂತರ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ರಾಮನಗರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತವರು ಕ್ಷೇತ್ರ. 2004, 2008, 2013, 2018ರ ಚುನಾವಣೆಯಲ್ಲಿ ಅವರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

Leave a Comment