ಸಿನೆಮಾ

ಜ್ಯೋತಿಷಿ ಮೊರೆ ಹೋಗಿ ಕುರಿಯಾದ ನಟ ನಿರ್ದೇಶಕ ಎಸ್.ನಾರಾಯಣ- ಏನಿದು ಪಂಗನಾಮ?

ಅಗ್ಗದ ಬಡ್ಡಿ ದರಕ್ಕೆ ಸಾಲ ತರಲು ಹೋದ ನಿರ್ದೇಶಕ ಎಸ್.ನಾರಾಯಣ್ ತಲೆಗೆ ಮಕ್ಮಲ್​ ಟೋಪಿ ಹಾಕಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಚೆಲುವಿನ ಚಿತ್ತಾರ ಸೇರಿದಂತೆ ಕನ್ನಡಕ್ಕೆ ಹಲವು ಹಿಟ್ ಚಿತ್ರ ನೀಡಿದ ನಿರ್ದೇಶಕ ಎಸ್.ನಾರಾಯಣ 2016 ರ ವೇಳೆಗೆ ಚಿತ್ರ ನಿರ್ಮಾಣಕ್ಕಾಗಿ ಲೋನ್ ಪಡೆಯಲು ಬ್ಯಾಂಕ್​ಗಳಿಗೆ ಅಲೆಯಲು ಆರಂಭಿಸಿದ್ದರು.

ಆದ್ರೇ ಎಲ್ಲೂ ಲೋನ್ ಗಿಟ್ಟಿರಲಿಲ್ಲ. ಈ ವೇಳೆ ಅವರಿಗೆ ವ್ಯಕ್ತಿಯೊಬ್ಬ ಪರಿಚಯವಾಗಿದ್ದು, ಸುಲಭವಾಗಿ 50 ಕೋಟಿ ರೂಪಾಯಿ ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದ. ಅಷ್ಟೇ ಅಲ್ಲ ಅದಕ್ಕಾಗಿ ಸಾಲ ನೀಡುವ ತಮಿಳುನಾಡಿನ ಜ್ಯೋತಿಷಿ ಮಂದಾರಮೂರ್ತಿ ಎಂಬಾತನನ್ನು ಪರಿಚಯಿಸಿದ್ದ.

ಆತ ಸಾಲ ಕೊಡಲು ಒಪ್ಪಿದ್ದಲ್ಲೇ ತಕ್ಷಣವೇ 50 ಕೋಟಿ ರೂಪಾಯಿಯನ್ನು ಎಸ್.ನಾರಾಯಣ ಹೆಸರಿಗೆ ಡಿಡಿ ತೆಗೆದುಕೊಟ್ಟಿದ್ದ ಎನ್ನಲಾಗಿದೆ. ಬಳಿಕ ಪ್ರೊಸೆಸಿಂಗ್​ ಫೀಸ್​ ಆಗಿ 43 ಲಕ್ಷ ರೂಪಾಯಿಗಳನ್ನು ನೀಡುವಂತೆ ಸೂಚಿಸಿದ್ದರು. ಹಿಂದೆ ಮುಂದೇ ಯೋಚಿಸದ ಎಸ್.ನಾರಾಯಣ, ಡಿಡಿ ಪಡೆದು ಪ್ರೊಸೆಶಿಂಗ್ ಫೀಸ್​ 43 ಲಕ್ಷ ನೀಡಿ ವಾಪಸ್ಸಾಗಿದ್ದಾರೆ.

ಆದರೇ ಕೊನೆಗೆ ಡಿಡಿ ಹಣ ಬಾರದ ಹಿನ್ನೆಲೆಯಲ್ಲಿ ಚೆಕ್ ಮಾಡಿದಾಗ ಅದು ನಕಲಿ ಡಿಡಿ ಎಂಬುದು ಎಸ್.ನಾರಾಯಣ ಗಮನಕ್ಕೆ ಬಂದಿದೆ. ಅದಾಗಲೇ ಸಾಲ ಕೊಟ್ಟ ಮಂದಾರಮೂರ್ತಿ ಪರಾರಿಯಾಗಿದ್ದು, ಎಸ್.ನಾರಾಯಣ ಕಂಗಾಲಾಗಿ ಯಶ್ವಂತಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ಮಂದಾರಮೂರ್ತಿ ಸಹಚರರನ್ನು ಬಂಧಿಸಲಾಗಿದ್ದು, ಆತನಿಗಾಗಿಯೂ ಬಲೆ ಬೀಸಲಾಗಿದೆ. ಒಟ್ಟಿನಲ್ಲಿ ಎಸ್.ನಾರಾಯಣ ಕಮ್ಮಿ ಬಡ್ಡಿದರದ ಆಸೆಗೆ ಮೋಸಹೋಗಿ ಈಗ ಕುರಿಗಳು ಸಾರ್ ಕುರಿಗಳು ಅಂತ ಹಾಡ್ತಿದ್ದಾರೆ.

Leave a Comment