ಅಪರಾಧ ಸುದ್ದಿಗಳು

ಸಿಲಿಕಾನ ಸಿಟಿಯಲ್ಲಿ ನಾಯಿಗಳ ಮಾರಣ ಹೋಮ- 30ಕ್ಕೂ ಹೆಚ್ಚು ನಾಯಿಗಳಿಗೆ ವಿಷವುಣಿಸಿದ ವಿಕೃತರು- ಕಾರಣ ಏನು ಗೊತ್ತಾ?!

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಭಾನುವಾರ ಬೆಳಗ್ಗೆ ವೇಳೆಗೆ 30 ಕ್ಕೂ ಹೆಚ್ಚು ನಾಯಿಗಳು ಏಕಾಏಕಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೌದು ವಿದ್ಯಾರಣ್ಯಪುರದ ಟೆಲಿಕಾಂ ಲೇಔಟ್​ನಲ್ಲಿ ಘಟನೆ ನಡೆದಿದ್ದು, ಬಡಾವಣೆಯಲ್ಲಿ ಆರಾಂವಾಗಿ ಓಡಾಡಿಕೊಂಡಿದ್ದ ನಾಯಿಗಳು ಏಕಾಏಕಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

 

ಮೂಲಗಳ ಪ್ರಕಾರ ಈ ಏರಿಯಾಕ್ಕೆ ಕಳ್ಳರ ಗುಂಪೊಂದು ಕಾಲಿಟ್ಟಿದ್ದು, ಎರಡು ಮೂರು ದಿನಗಳಿಂದ ಏರಿಯಾದಲ್ಲೇ ಅಡ್ಡಾಡಿಕೊಂಡು ಕಳ್ಳತನಕ್ಕೆ ಸೂಕ್ತವಾಗುವ ಮನೆಗಳ ಹುಡುಕಾಟದಲ್ಲಿತ್ತು ಎನ್ನಲಾಗಿದೆ. ಆದರೇ ರಾತ್ರಿ ವೇಳೆ ಏರಿಯಾದಲ್ಲಿ ಓಡಾಡಲು ಈ ಬೀದಿನಾಯಿಗಳು ಅಡ್ಡಿ ಉಂಟು ಮಾಡೋದರಿಂದ ಕಳ್ಳರೇ ಶನಿವಾರ ರಾತ್ರಿ ನಾಯಿಗಳಿಗೆ ವಿಷಯುಕ್ತ ಮಾಂಸ ತಿನ್ನಿಸಿ ಸಾಮೂಹಿಕವಾಗಿ ಸಾಯಿಸಿದ್ದಾರೆ ಎನ್ನಲಾಗುತ್ತಿದೆ.

ಬೆಳ್ಳಂ ಬೆಳ್ಳಗ್ಗೆ ಎಲ್ಲೆಂದರಲ್ಲಿ ಸತ್ತುಬಿದ್ದ ನಾಯಿಗಳನ್ನು ಕಂಡು ಬಡಾವಣೆ ನಿವಾಸಿಗಳು ಕಂಗಾಲಾಗಿದ್ದಾರೆ. ಮೊದಲು ಇದು ಯಾವುದೋ ಸೈಕೋ ಕೃತ್ಯ ಎಂದು ಅಂದಾಜಿಸಲಾಗಿತ್ತಾದರೂ ಬಳಿಕ ಕಳ್ಳರ ಕೃತ್ಯವಿರಬೇಕೆಂಬ ಅನುಮಾನ ಕಾಡಿದೆ.

 

 

 

 

ಇನ್ನು ಘಟನೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ನಮ್ಮ ಭಾಗದಲ್ಲಿ ಮೊದಲೇ ಕಳ್ಳತನ ಹೆಚ್ಚಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ನಾಯಿಗಳು ಬೇರೆ ಸಾವನ್ನಪ್ಪಿರೋದು ನಮ್ಮ ಆತಂಕ ಹೆಚ್ಚಿಸಿದೆ ಎಂದಿದ್ದಾರೆ. ಇನ್ನು ಸ್ಥಳೀಯ ವಿದ್ಯಾರಣ್ಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ನಾಯಿಗೆ ವಿಷ ಉಣಿಸಿ ಮಾರಣಹೋಮ ನಡೆಸಿದ ವಿಕೃತ ಮನಸ್ಸುಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Comment