ರಾಜಕೀಯ

ಶ್ರಾವಣಮಾಸ ಮುಗಿಯುವ ಮುನ್ನ ಬದಲಾಗ್ತಾರಾ ಸಿಎಂ- ಸಮ್ಮಿಶ್ರ ಸರ್ಕಾರ ಕುರ್ಚಿ ಅಲುಗಾಡುತ್ತಿರೋದ್ಯಾಕೆ? -ಮತ್ತೆ ಮುಗ್ಗರಿಸ್ತಾರಾ ಕುಮಾರಸ್ವಾಮಿ!

ಸೈದ್ದಾಂತಿಕವಾಗಿ ಹಾವು-ಮುಂಗುಸಿಯಂತೆ ಆಡುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್​ ಅಧಿಕಾರದಾಸೆಗೆ ಮಾಡಿಕೊಂಡ ಮೈತ್ರಿ ಕುಮಾರಸ್ವಾಮಿ ಪಾಲಿಗೆ ಹಗ್ಗದ ಮೇಲಿನ ನಡಿಗೆಯಾಗಿರೋದಂತು ಸತ್ಯ. ಸದಾಕಾಲ ಆತಂಕದಲ್ಲೇ ಅಧಿಕಾರ ನಡೆಸುವ ಸ್ಥಿತಿ ಎದುರಿಸುತ್ತಿರುವ ಕುಮಾರಸ್ವಾಮಿ ಶ್ರಾವಣ ಮಾಸವೇ ಕಂಟಕವಾಗಿ ಪರಿಣಮಿಸಲಿದೇ ಅನ್ನೋ ಮಾತು ವಿಧಾನಸೌಧದ ಪಡಸಾಲೆಯಲ್ಲಿ ಕೇಳಿಬರತೊಡಗಿದೆ. ಹೌದು ಶ್ರಾವಣದ ಕೊನೆಯ ಸೋಮವಾರದ ವೇಳೆ ಬಿಎಸ್​ವೈ ಮುಖ್ಯಮಂತ್ರಿಯಾಗಲಿದ್ದಾರಂತೆ…!

 
ಒಮ್ಮೇ ಪ್ರಮಾಣ ವಚನ ಸ್ವೀಕರಿಸಿ ಸೋಲುಂಡಿರುವ ಬಿಎಸ್​ವೈ ಮತ್ತೆ ಮುಖ್ಯಮಂತ್ರಿಯಾಗ್ತಾರಾ? ಅಂತಿದ್ದೀರಾ ಆ ಅನುಮಾನ ಎಲ್ಲರನ್ನು ಕಾಡುತ್ತಿದೆಯಾದರೂ, ಸಮ್ಮಿಶ್ರ ಸರ್ಕಾರದ ಪತನ ಬಹುತೇಕ ಖಚಿತ ಅನ್ನೋ ಮಾತು ಮಾತ್ರ ಎಲ್ಲೆಡೆ ಕೇಳಿಬರ್ತಿದೆ. ಇದಕ್ಕೆ ಕಾರಣ ಎನು, ಯಾರಿಂದ ಸರ್ಕಾರ ಪತನ ಇವೆಲ್ಲ ಸಧ್ಯಕ್ಕೆ ಚರ್ಚೆಯಲ್ಲಿರೋ ಅಂಶಗಳಾದ್ರೂ ಕಾಂಗ್ರೆಸ್​-ಜೆಡಿಎಸ್​​ನ ತಳಮಟ್ಟದ ಕಾರ್ಯಕರ್ತರಿಂದ ಆರಂಭಿಸಿ ಹಿರಿಯವರೆಗೆ ಎಲ್ಲರೂ ಸರ್ಕಾರದ ಆಯುಷ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ಜೆಡಿಎಸ್​ ಮತ್ತು ಕಾಂಗ್ರೆಸ್​ ನ ಸಚಿವಸ್ಥಾನಾಂಕ್ಷಿ ಎಮ್​ಎಲ್​ಎಗಳು ಅಸಮಧಾನದ ತುತ್ತ ತುದಿಯಲ್ಲಿದ್ದಾರೆ. ಆಷಾಡಮಾಸದ ನೆಪ ಹೇಳಿ ಸಚಿವ ಸಂಪುಟ ವಿಸ್ತರಣೆ ಮುಂದೂಡಿದ್ದ ಸಮ್ಮಿಶ್ರ ಕಾಂಗ್ರೆಸ್-ಜೆಡಿಎಸ್​ ಹೈಕಮಾಂಡ್​ಗಳು, ಶ್ರಾವಣ ಮಾಸ ಮುಗಿಯುತ್ತ ಬಂದರೂ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚಕಾರವನ್ನೇ ಎತ್ತುತ್ತಿಲ್ಲ.

 

ಈಗ ಸಪ್ಟೆಂಬರ್​ ಮೊದಲ ವಾರದಲ್ಲಿ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಎಲ್ಲ ತಲೆಬಿಸಿಗಳಿಂದ ಮುಕ್ತವಾಗಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿರುವ ಕನಸಿನೊಂದಿಗೆ ಮಾಜಿ ಸಿಎಂ ಸಿದ್ಧರಾಮಯ್ಯ, ಯುರೋಪನತ್ತ ಪ್ರಯಾಣ ಬೆಳೆಸಲು ಸನ್ನದ್ಧರಾಗಿದ್ದಾರೆ. ಕೇವಲ ಸಿದ್ಧರಾಮಯ್ಯ ಮಾತ್ರವಲ್ಲ, ಅವರಿಗೆ ಕಂದಾಯ ಸಚಿವ ದೇಶಪಾಂಡೆ, ಕೆ.ಜೆ ಜಾರ್ಜ್​ ಕೂಡ ಸಾಥ್​ ನೀಡಲಿದ್ದಾರೆ.
ಇತ್ತೀಚಿಗಷ್ಟೆ ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದಿದ್ದ ಸಿದ್ಧರಾಮಯ್ಯ, ಈಗ ಕಾಂಗ್ರೆಸ್​​ನ ಹಿರಿಯರ ಜೊತೆ ಪ್ರಯಾಣ ಬೆಳೆಸುತ್ತಿರುವುದು ಮತ್ತು ಅಲ್ಲಿ ಇನ್ನೊಂದಿಷ್ಟು ಕಾಂಗ್ರೆಸ್​ ಶಾಸಕರನ್ನು ಭೇಟಿಯಾಗಲಿದ್ದಾರೆ ಎಂಬುದು ಎಲ್ಲೋ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಸಾಕ್ಷಿ ಒದಗಿಸುತ್ತಿದೆ.

 

ಇನ್ನು ಬಿಜೆಪಿಯೂ ಕೂಡ 10 ಕಾಂಗ್ರೆಸ್​ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಡಬಡಿಸುತ್ತಿದೆ. ಮೂಲಗಳ ಪ್ರಕಾರ ಬಿಜೆಪಿ ಸರ್ಕಾರ ಉರುಳಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಆದರೇ 2019 ರ ಚುನಾವಣೆಯ ದೂರದೃಷ್ಟಿಯಿಂದ ಬಿಜೆಪಿ ಹೈಕಮಾಂಡ್​ ಈ ದುಸ್ಸಾಹಕ್ಕೆ ಕೈಹಾಕಲು ರಾಜ್ಯ ಕಮಲ ಪಾಳಯಕ್ಕೆ ಅನುಮತಿ ನೀಡುತ್ತಿಲ್ಲ.
ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಮೇಲಾಟವಂತೂ ಆರಂಭವಾಗಿದ್ದು, ಯಾವ ಹಂತ ತಲುಪತ್ತೆ ಕಾದುನೋಡಬೇಕಿದೆ. ಈ ಮಧ್ಯೆ ಮುಖ್ಯಮಂತ್ರಿಗಳಾಗಿ ಬಿಎಸ್​ವೈ ಅಧಿಕಾರ ಸ್ವೀಕಾರ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ನನ್ನ ಸರ್ಕಾರದ ವಿರುದ್ಧ ಏನೆಲ್ಲ ಷಡ್ಯಂತ್ರ ನಡೆದಿದೆ, ಹೈಕಮಾಂಡ್​​ಗೆ ಏನೆಲ್ಲ ಹೇಳಲಾಗುತ್ತಿದೆ ಎಂಬುದು ಗಮನದಲ್ಲಿದೆ. ಈ ಬಗ್ಗೆ ಸೂಕ್ತ ಕಾಲದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡುತ್ತೇನೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲರ ಚಿತ್ತ ಸಪ್ಟೆಂಬರ್​ 3 ರತ್ತ ನೆಟ್ಟಿದ್ದು, ಯಾರ ಭವಿಷ್ಯ ಏನಾಗುತ್ತೆ ಕಾದು ನೋಡಬೇಕಿದೆ.

Leave a Comment