ರಾಜಕೀಯ ಸುದ್ದಿಗಳು

ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗ್ತಾರಾ ತೇಜಸ್ವಿ ಸೂರ್ಯ? ತೇಜಸ್ವಿ ಮಾತಿಗೆ ಒಲಿತಾರಾ ಮತದಾರ?

ಬೆಂಗಳೂರಿನ ರಾಜಕಾರಣದಲ್ಲಿ ಮಹತ್ವದ ಕ್ಷೇತ್ರವಾಗಿರುವ ಜಯನಗರದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನದಿಂದ ಮುಂದೂಡಲಾಗಿದ್ದ ಚುನಾವಣೆ ಇನ್ನೇನು ಕೆಲದಿನದಲ್ಲಿ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಚರ್ಚೆ ಜೋರಾಗಿದ್ದು, ಪ್ರಖರ ಹಿಂದುತ್ವವಾಗಿ ತೇಜಸ್ವಿ ಸೂರ್ಯ ಸೇರಿದಂತೆ ಹಲವರ ಹೆಸರು ಕೇಳಿಬಂದಿದೆ.

 
ಜಯನಗರ ಬೆಂಗಳೂರಿನ ಬಿಜೆಪಿಯ ಭದ್ರಕೋಟೆ ಎಂದೇ ಹೆಸರಾಗಿದೆ. ಹೀಗಾಗಿ ವಿಜಯಕುಮಾರ್ ಬಳಿಕ ಗೆಲ್ಲುವ ಕುದುರೆ ಯಾರಾಗಬಹುದು ಎಂಬುದರ ಬಗ್ಗೆ ಬಿಜೆಪಿ ಈಗಾಗಲೇ ಚರ್ಚೆ ಆರಂಭಿಸಿದೆ. ಈ ಮೊದಲು ವಿಜಯಕುಮಾರ್ ಸಹೋದರ ಪ್ರಹ್ಲಾದ್​​ ಹೆಸರು ಚರ್ಚೆಯಲ್ಲಿ ಬಂದಿತ್ತಾದರೂ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಬಾರದು ಎಂಬ ಕಾರಣಕ್ಕೆ ಆ ಹೆಸರು ಅಂತಿಮವಾಗಿಲ್ಲ.


ಹೀಗಾಗಿ ಈಗಾಗಲೇ ಈ ಬಗ್ಗೆ ಚರ್ಚೆ ಜೋರಾಗಿದ್ದು, ನಿನ್ನೆ ಬಿಜೆಪಿಯ ಕಾರ್ಪೋರೇಟರ್​ಗಳು ಗುಪ್ತ ಸಭೆ ನಡೆಸಿ ಅಭ್ಯರ್ಥಿಗಳು ಯಾರಾಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಭದ್ರಕೋಟೆ ಎನ್ನಿಸಿಕೊಂಡಿರುವ ಜಯನಗರವನ್ನು ಉಳಿಸಿಕೊಳ್ಳಬೇಕಾಗಿರೋದರಿಂದ ಪ್ರಖರ ವಾಗ್ಮಿ ಎನ್ನಿಸಿರುವ ತೇಜಸ್ವಿ ಸೂರ್ಯಗೆ ಅವಕಾಶ ನೀಡುತ್ತಾರೆ ಎನ್ನಲಾಗುತ್ತಿದೆ.


ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ಈ ಬಗ್ಗೆ ನನ್ನನ್ನು ಇದುವರೆಗೂ ಯಾರು ಸಂಪರ್ಕಿಸಲಿಲ್ಲ. ಸಂಪರ್ಕಿಸಿದರೇ ಮುಂದಿನ ನಿರ್ಧಾರ ಎಂದು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ಈಗಾಗಲೇ ಶಾಸಕ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಕಣದಲ್ಲಿರೋದರಿಂದ ಬಿಜೆಪಿಯಿಂದಲೂ ಯುವಮುಖಗಳಿಗೆ ಅವಕಾಶ ನೀಡುವ ಉದ್ದೇಶವೂ ಬಿಜೆಪಿಗೆ ಇದ್ದಂತಿದೆ. ಇನ್ನು ಕೇವಲ ತೇಜಸ್ವಿ ಸೂರ್ಯ ಮಾತ್ರ ಅಲ್ಲದೇ, ವಿಧಾನಪರಿಷತ್ ಸದಸ್ಯೆ ತಾರಾ ಅನೂರಾಧ, ಕಟ್ಟೆ ಸತ್ಯನಾರಾಯಣ ಸೇರಿ ಹಲವು ಬಿಜೆಪಿ ಮುಖಂಡರ ಹೆಸರು ಇಲ್ಲಿ ಕೇಳಿಬಂದಿದೆ.

Leave a Comment