ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಡುವ ಸಶಸ್ತ್ರ ಸೀಮಾ ಬಲ (SSB) ವಿಭಾಗವು 2026ನೇ ಸಾಲಿನ ಗ್ರೂಪ್ ‘ಸಿ’ ನಾನ್-ಗೆಜೆಟೆಡ್ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 404 ಹುದ್ದೆಗಳು ಖಾಲಿ ಇದ್ದು, ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರವಾಗಿ ಕೇಂದ್ರ ಸರ್ಕಾರಿ ನೌಕರಿ ಪಡೆಯುವ ಸುವರ್ಣಾವಕಾಶ ಇದಾಗಿದೆ.
ಶೈಕ್ಷಣಿಕ ಹಾಗೂ ಕ್ರೀಡಾ ಅರ್ಹತೆಗಳು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್‌ನಿಂದ ಕನಿಷ್ಠ 10ನೇ ತರಗತಿ (ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು. ಕ್ರೀಡಾ ಅರ್ಹತೆಯಾಗಿ ಅಥ್ಲೆಟಿಕ್ಸ್, ಈಜು, ಬಾಕ್ಸಿಂಗ್, ಫುಟ್‌ಬಾಲ್, ಹಾಕಿ, ಕಬಡ್ಡಿ, ವಾಲಿಬಾಲ್, ಕುಸ್ತಿ ಅಥವಾ ಯೋಗಾಸನದಂತಹ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ಅಥವಾ ರಾಜ್ಯವನ್ನು ಪ್ರತಿನಿಧಿಸಿರಬೇಕು. ಜೊತೆಗೆ, ಜೂನಿಯರ್/ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅಥವಾ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಪದಕ ವಿಜೇತರಾಗಿರುವವರಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಯೋಮಿತಿ ಮತ್ತು ವೇತನ ಶ್ರೇಣಿ ಅಭ್ಯರ್ಥಿಗಳ ವಯಸ್ಸು 18 ರಿಂದ 23 ವರ್ಷಗಳ ಒಳಗಿರಬೇಕು. ಸರ್ಕಾರಿ ನಿಯಮಗಳ ಅನ್ವಯ ಮೀಸಲಾತಿ ವ್ಯಾಪ್ತಿಗೆ ಬರುವ ಎಸ್‌ಸಿ (SC), ಎಸ್‌ಟಿ (ST) ಹಾಗೂ ಒಬಿಸಿ (OBC) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ 21,700 ರೂ. ಗಳಿಂದ 69,100 ರೂ. ವರೆಗೆ ಆಕರ್ಷಕ ವೇತನ ಶ್ರೇಣಿ ಇರಲಿದ್ದು, ಇದರೊಂದಿಗೆ ಸರ್ಕಾರದ ಇತರ ಭತ್ಯೆಗಳು ಹಾಗೂ ಸೌಲಭ್ಯಗಳು ದೊರೆಯಲಿವೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಈ ನೇಮಕಾತಿಯ ಅತಿ ದೊಡ್ಡ ವಿಶೇಷತೆ ಎಂದರೆ, ಇಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ ಅಭ್ಯರ್ಥಿಗಳ ಕ್ರೀಡಾ ಸಾಧನೆ, ಅರ್ಹತಾ ಪ್ರಮಾಣಪತ್ರಗಳು ಹಾಗೂ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ನೇರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆಯಾದವರು ದೇಶದ ಯಾವುದೇ ಭಾಗದಲ್ಲಿ ಅಥವಾ ವಿದೇಶದಲ್ಲೂ ಸೇವೆ ಸಲ್ಲಿಸಲು ಸಿದ್ಧರಿರಬೇಕು.
ಅರ್ಜಿ ಶುಲ್ಕ ಮತ್ತು ಕೊನೆಯ ದಿನಾಂಕ ಅರ್ಜಿ ಸಲ್ಲಿಸಲು ಜೂನ್ 7 ಕೊನೆಯ ದಿನಾಂಕವಾಗಿದೆ. ಸಾಮಾನ್ಯ ವರ್ಗ (General), ಇಡಬ್ಲ್ಯೂಎಸ್ (EWS) ಮತ್ತು ಒಬಿಸಿ (OBC) ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆದರೆ, ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.