ಗೃಹ ಜ್ಯೋತಿ ಯೋಜನೆ ಮನೆ-ಮನೆ ಪರಿಶೀಲನೆ: ಬಾಡಿಗೆದಾರರು ಆತಂಕಪಡುವ ಅಗತ್ಯವಿಲ್ಲ, ಬೆಸ್ಕಾಂ ಸ್ಪಷ್ಟನೆ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳ ದತ್ತಾಂಶ ಪರಿಶೀಲನಾ ಕಾರ್ಯ ಜುಲೈ 1ರಿಂದ ಬಿರುಸಿನಿಂದ ಸಾಗುತ್ತಿದೆ. ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಲ್ಲಿ, ವಿಶೇಷವಾಗಿ ಬಾಡಿಗೆದಾರರಲ್ಲಿ ಮೂಡಿದ್ದ ಗೊಂದಲಗಳಿಗೆ ಬೆಸ್ಕಾಂ ಮಹತ್ವದ ಸ್ಪಷ್ಟನೆ ನೀಡಿದೆ.

ಬಾಡಿಗೆದಾರರಿಗೆ ಬೆಸ್ಕಾಂ ಅಭಯ ಮನೆ-ಮನೆ ಸಮೀಕ್ಷೆ ವೇಳೆ ಹಳೆಯ ಬಾಡಿಗೆದಾರರ ಆಧಾರ್ ವಿವರಗಳನ್ನು ತೆಗೆದುಹಾಕಿ, ಪ್ರಸ್ತುತ ವಾಸವಿರುವ ಬಾಡಿಗೆದಾರರ ಆಧಾರ್ ಮಾಹಿತಿಯನ್ನು ನವೀಕರಿಸಿಕೊಳ್ಳಲು (Update) ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಇದ್ದ ಬಾಡಿಗೆದಾರರ ಆಧಾರ್ ಮಾಹಿತಿಯಿಂದಾಗಿ ತಮಗೆ ಯೋಜನೆ ಸ್ಥಗಿತಗೊಳ್ಳಲಿದೆಯೇ ಎಂಬ ಆತಂಕ ಪಡುವ ಅಗತ್ಯವಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಪರಿಶೀಲನೆ ವೇಳೆ ನೀಡಬೇಕಾದ ದಾಖಲೆಗಳು ಎಸ್ಕಾಂಗಳ ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ, ಸ್ಥಳದಲ್ಲೇ ಪರಿಶೀಲನೆ ನಡೆಸಿ ಘೋಷಣಾ ಪತ್ರವನ್ನು ಭರ್ತಿ ಮಾಡಲಿದ್ದಾರೆ. ಈ ಪ್ರಕ್ರಿಯೆ ಸುಗಮವಾಗಿ ನಡೆಯಲು ಸಾರ್ವಜನಿಕರು ಈ ಕೆಳಗಿನ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳುವಂತೆ ಇಂಧನ ಇಲಾಖೆ ಕೋರಿದೆ:

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಮತದಾರರ ಗುರುತಿನ ಚೀಟಿ (Voter ID)
  • ಪ್ಯಾನ್ ಕಾರ್ಡ್
  • ರೇಷನ್ ಕಾರ್ಡ್
  • ಬಾಡಿಗೆ ಒಪ್ಪಂದದ ಪತ್ರ (ಬಾಡಿಗೆದಾರರಾಗಿದ್ದರೆ ಮಾತ್ರ)

ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ ಮಾಹಿತಿ ಸಂಗ್ರಹಣೆಯ ವೇಳೆ ಫಲಾನುಭವಿಯ ಪ್ರವರ್ಗ ಅಥವಾ ಜಾತಿಯ ವಿವರಗಳನ್ನು ನೀಡುವುದು ಕಡ್ಡಾಯವಲ್ಲ, ಇದು ಸಂಪೂರ್ಣವಾಗಿ ಐಚ್ಛಿಕವಾಗಿದೆ. ಒಂದು ವೇಳೆ ಗ್ರಾಹಕರಿಗೆ ತಮ್ಮ ಜಾತಿ ವಿವರ ನೀಡಲು ಇಷ್ಟವಿಲ್ಲದಿದ್ದರೆ, ಮೊಬೈಲ್ ಅಪ್ಲಿಕೇಶನ್‌ನಲ್ಲಿ ‘ಮಾಹಿತಿ ನೀಡಲು ನಿರಾಕರಣೆ’ ಎಂಬ ಆಯ್ಕೆಯನ್ನು ನಮೂದಿಸುವಂತೆ ಸಿಬ್ಬಂದಿಗೆ ಈಗಾಗಲೇ ಇಲಾಖೆಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸಹಾಯವಾಣಿ ಸಂಖ್ಯೆಗಳು ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್ ಸೇರಿದಂತೆ ರಾಜ್ಯದ ಐದೂ ಎಸ್ಕಾಂಗಳ ವ್ಯಾಪ್ತಿಯಲ್ಲಿ ಈ ಪರಿಶೀಲನಾ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಮೀಟರ್ ರೀಡರ್‌ಗಳೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಯಾವುದೇ ಹೆಚ್ಚಿನ ಮಾಹಿತಿ, ದೂರು ಅಥವಾ ಗೊಂದಲಗಳಿದ್ದರೆ ಪ್ರತಿದಿನ ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:

  • 9480816111
  • 9480816112
  • 9480816113
  • 9480816114

Leave a Reply

Your email address will not be published. Required fields are marked *