ಎಸ್‌ಡಿಆರ್‌ಎಫ್‌ (SDRF) ಬೃಹತ್ ನೇಮಕಾತಿ: ಅಗ್ನಿವೀರರು, ಎನ್‌ಸಿಸಿ ಅಭ್ಯರ್ಥಿಗಳಿಗೆ ಆದ್ಯತೆ, ಮಹಿಳೆಯರಿಗೆ 15% ಮೀಸಲಾತಿ!

ಆ. 29: ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಮುಂದಿನ 5 ವರ್ಷಗಳಲ್ಲಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಡ್ಡಾಯವಾಗಿ ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಸ್ಥಾಪಿಸಲು ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 2025ರಲ್ಲಿ ತಿದ್ದುಪಡಿಯಾದ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಈ ಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ.

ನೇಮಕಾತಿಯಲ್ಲಿ ಯಾರಿಗೆಲ್ಲಾ ಆದ್ಯತೆ? ಹೊಸದಾಗಿ ರಚನೆಯಾಗಲಿರುವ ಎಸ್‌ಡಿಆರ್‌ಎಫ್ ಪಡೆಯ ನೇರ ನೇಮಕಾತಿಯಲ್ಲಿ ಅಗ್ನಿವೀರರು ಮತ್ತು ಎನ್‌ಸಿಸಿ (NCC) ಪ್ರಮಾಣಪತ್ರ ಹೊಂದಿರುವ ಯುವಕರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಮಹಿಳೆಯರಿಗೆ ಶೇ. 15ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ. ಪಡೆಯ ಕಾರ್ಯಕ್ಷಮತೆ ಹೆಚ್ಚಿಸಲು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಅತ್ಯಂತ ದೈಹಿಕ ಕ್ಷಮತೆ ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಪೊಲೀಸ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF), ಮಾಜಿ ಸೈನಿಕರು ಹಾಗೂ ಎನ್‌ಡಿಆರ್‌ಎಫ್ (NDRF) ಸಿಬ್ಬಂದಿಯನ್ನು ಈ ಪಡೆಯಲ್ಲಿ ನೇಮಿಸಿಕೊಳ್ಳಲಾಗುತ್ತದೆ.

ಪಡೆಯ ರಚನೆ ಹೇಗಿರಲಿದೆ? ಸಂಪೂರ್ಣವಾಗಿ ಎನ್‌ಡಿಆರ್‌ಎಫ್ ಮಾದರಿಯಲ್ಲಿಯೇ ಈ ಹೊಸ ಪಡೆಯನ್ನು ಬಟಾಲಿಯನ್‌ಗಳಾಗಿ ಸಂಘಟಿಸಲಾಗುತ್ತದೆ. ಪ್ರತಿಯೊಂದು ಬಟಾಲಿಯನ್ 600 ರಿಂದ 1200 ಸಿಬ್ಬಂದಿಯನ್ನು ಹೊಂದಿರಲಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ಡಿಜಿಪಿ (DGP) ಶ್ರೇಣಿಯ ಅಧಿಕಾರಿಗಳು ನಿರ್ವಹಿಸಲಿದ್ದಾರೆ. ಈ ಬಟಾಲಿಯನ್‌ಗಳನ್ನು 9 ರಿಂದ 10 ಸ್ವತಂತ್ರ ತಂಡಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ತಂಡದಲ್ಲೂ 45 ರಿಂದ 50 ನುರಿತ ರಕ್ಷಣಾ ಸಿಬ್ಬಂದಿ ಇರುತ್ತಾರೆ. ಇವರು ರಕ್ಷಣೆ, ವೈದ್ಯಕೀಯ ನೆರವು ಮತ್ತು ಸಂವಹನ ವ್ಯವಸ್ಥೆಯನ್ನು ನಿಭಾಯಿಸಲಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ತುರ್ತು ಕಾರ್ಯಾಚರಣೆ: ಸಣ್ಣ ಪುಟ್ಟ ವಿಕೋಪಗಳಿಗೂ ಕೇಂದ್ರದ ಎನ್‌ಡಿಆರ್‌ಎಫ್ ಪಡೆಯನ್ನು ಅವಲಂಬಿಸುವುದನ್ನು ತಪ್ಪಿಸಲು ಮತ್ತು ವಿಳಂಬವಿಲ್ಲದೆ ತಕ್ಷಣವೇ ಜೀವ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಈ ಎಸ್‌ಡಿಆರ್‌ಎಫ್ ಪಡೆಯು ಸ್ಥಳೀಯ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

Leave a Reply

Your email address will not be published. Required fields are marked *