ಬೆಂಗಳೂರಿನಲ್ಲಿ ಕಸ ವಿಲೇವಾರಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಮತ್ತು ಅಕ್ರಮಗಳಿಗೆ ಬ್ರೇಕ್ ಹಾಕಲು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಕಸದ ವಾಹನಗಳ ಸಿಬ್ಬಂದಿ ಕೆಲಸಕ್ಕೆ ಹಾಜರಾಗದೆ ನಕಲಿ ಹಾಜರಾತಿ ತೋರಿಸುವುದನ್ನು ತಡೆಯಲು ‘ಫೇಸ್ ರೆಕಗ್ನಿಷನ್’ (ಮುಖ ಗುರುತಿಸುವಿಕೆ) ತಂತ್ರಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ವಾಹನಗಳು ನಿಗದಿತ ಮಾರ್ಗದಲ್ಲೇ ಸಂಚರಿಸುವುದನ್ನು ಖಚಿತಪಡಿಸಿಕೊಳ್ಳಲು ಜಿಪಿಎಸ್ (GPS) ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ.
ಕಸ ಸಂಗ್ರಹ ಸಾಮರ್ಥ್ಯ 9000 ಟನ್ಗೆ ಹೆಚ್ಚಳ ಪ್ರಸ್ತುತ ನಗರದಲ್ಲಿ ನಿತ್ಯ 5600 ಟನ್ ಕಸ ಸಂಗ್ರಹಿಸಲಾಗುತ್ತಿದ್ದು, ಇದನ್ನು 9000 ಟನ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಹಳೆಯ ವಾಹನಗಳ ಬದಲಿಗೆ ಹೆಚ್ಚಿನ ಸಾಮರ್ಥ್ಯದ ಹೊಸ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಹೊಸ ಟೆಂಡರ್ ಪ್ರಕ್ರಿಯೆಯಲ್ಲೇ ವಾಹನಗಳಿಗೆ ಜಿಪಿಎಸ್ ಕಡ್ಡಾಯ ಎಂಬ ಷರತ್ತು ವಿಧಿಸಲಾಗಿದ್ದು, ಹೊಸ ವಾಹನಗಳ ಖರೀದಿ ಮತ್ತು ಜಿಪಿಎಸ್ ಅಳವಡಿಕೆಗೆ ಗುತ್ತಿಗೆದಾರರಿಗೆ ಅಗತ್ಯ ಕಾಲಾವಕಾಶ ನೀಡಲಾಗಿದೆ.
ಮೂಲಭೂತ ಸೌಕರ್ಯಗಳ ದುರಸ್ತಿಗೆ ನವೆಂಬರ್ನಲ್ಲಿ ವಿಶೇಷ ಡ್ರೈವ್ ಮಳೆಯಿಂದಾಗಿ ಹದಗೆಟ್ಟಿರುವ ರಸ್ತೆಗಳು, ಗುಂಡಿಗಳು, ಒಳಚರಂಡಿ, ಬೀದಿ ದೀಪಗಳ ಸಮಸ್ಯೆ ಹಾಗೂ ರಸ್ತೆಬದಿ ಬಿದ್ದಿರುವ ಮರಗಳ ತೆರವಿಗಾಗಿ ನವೆಂಬರ್ 1 ರಿಂದ 30 ರವರೆಗೆ ವಿಶೇಷ ಕಾರ್ಯಾಚರಣೆ (ಡ್ರೈವ್) ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಲಹೆಯಂತೆ, ಪ್ರತಿಯೊಂದು ವಾರ್ಡ್ನ ಸಮಸ್ಯೆಗಳನ್ನು ಸರ್ವೆ ಮಾಡಿ ಪರಿಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಸ್ತೆಗಳ ದುರಸ್ತಿಯಿಂದ ನಗರದ ಟ್ರಾಫಿಕ್ ಸಮಸ್ಯೆ ಕೂಡ ಕೊಂಚ ಮಟ್ಟಿಗೆ ಹತೋಟಿಗೆ ಬರಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.