2026ರ ಸಾಲಿನ ಇಂಡಿಯಾ ಪೋಸ್ಟ್ ಗ್ರಾಮೀಣ ಡಾಕ್ ಸೇವಕ್ (GDS) ನೇಮಕಾತಿಯ ಅಧಿಸೂಚನೆ ಪ್ರಕಟವಾಗಿದೆ. ದೇಶಾದ್ಯಂತ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ 23 ಸಾವಿರಕ್ಕೂ ಅಧಿಕ ಜಿಡಿಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಕೇವಲ ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ನೇರ ಆಯ್ಕೆ ಮಾಡುವುದು ಈ ನೇಮಕಾತಿಯ ಬಹುದೊಡ್ಡ ವಿಶೇಷತೆಯಾಗಿದೆ.
ಲಭ್ಯವಿರುವ ಹುದ್ದೆಗಳು ಹಾಗೂ ಕಾರ್ಯವೈಖರಿ: ಗ್ರಾಮೀಣ ಅಂಚೆ ಸೇವೆಗಳಿಗಾಗಿ ಮುಖ್ಯವಾಗಿ ಮೂರು ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ:
- ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM): ಇವರು ಗ್ರಾಮೀಣ ಅಂಚೆ ಕಚೇರಿ ಶಾಖೆಯ ಸಂಪೂರ್ಣ ಜವಾಬ್ದಾರಿ ಹೊರುತ್ತಾರೆ. ಅಂಚೆ ಸೇವೆಗಳ ಜೊತೆಗೆ ಇಲಾಖೆಯ ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸುವುದು ಇವರ ಮುಖ್ಯ ಕರ್ತವ್ಯ.
- ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ABPM): ಅಂಚೆ ಚೀಟಿಗಳ ಮಾರಾಟ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸೇವೆಗಳು, ಮನೆ-ಮನೆಗೆ ತೆರಳಿ ಪತ್ರಗಳ ಬಟವಾಡೆ ಮಾಡುವುದು ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇವರು ಮಾಡುತ್ತಾರೆ.
- ಡಾಕ್ ಸೇವಕ್: ಅಂಚೆ ಕಚೇರಿಗಳಲ್ಲಿ ಪತ್ರಗಳ ವಿಂಗಡಣೆ, ವಿತರಣೆ ಮತ್ತು ಮಾರ್ಕೆಟಿಂಗ್ ಕಾರ್ಯಗಳಲ್ಲಿ ಇವರು ನೆರವಾಗುತ್ತಾರೆ.
ಇದು ಖಾಯಂ ಸರ್ಕಾರಿ ಹುದ್ದೆಯೇ? ಜಿಡಿಎಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ನೇರವಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ‘ಖಾಯಂ ನೌಕರರು’ ಎಂದು ಪರಿಗಣಿಸಲಾಗುವುದಿಲ್ಲ. ಇವರ ಕಾರ್ಯನಿರ್ವಹಣೆಯು ಜಿಡಿಎಸ್ ನಿಯಮಾವಳಿಗಳ (ನಡವಳಿಕೆ ಮತ್ತು ನೇಮಕಾತಿ) ಅನ್ವಯ ನಡೆಯುತ್ತದೆ. ಆದಾಗ್ಯೂ, ಇದೊಂದು ಅತ್ಯಂತ ಭದ್ರತೆಯುಳ್ಳ ಹಾಗೂ ಸುರಕ್ಷಿತ ಉದ್ಯೋಗವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು 65 ವರ್ಷ ವಯಸ್ಸಾಗುವವರೆಗೆ ಯಾವುದೇ ಆತಂಕವಿಲ್ಲದೆ ಸೇವೆಯಲ್ಲಿ ಮುಂದುವರಿಯುವ ಅವಕಾಶವಿದೆ.
ವೇತನ ಶ್ರೇಣಿ ಹಾಗೂ ಇತರೆ ಸೌಲಭ್ಯಗಳು: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ:
- BPM ಹುದ್ದೆಗೆ: ಮಾಸಿಕ ₹12,000 ದಿಂದ ₹29,380 ರವರೆಗೆ ವೇತನ ಶ್ರೇಣಿ ಇರಲಿದೆ.
- ABPM ಮತ್ತು ಡಾಕ್ ಸೇವಕ್ ಹುದ್ದೆಗೆ: ಮಾಸಿಕ ₹10,000 ದಿಂದ ₹24,470 ರವರೆಗೆ ವೇತನ ಶ್ರೇಣಿ ಇರುತ್ತದೆ.
ಈ ನೌಕರರಿಗೆ ಸಾಮಾನ್ಯ ಸರ್ಕಾರಿ ನೌಕರರಂತೆ ಮಾಸಿಕ ಪಿಂಚಣಿ ಸೌಲಭ್ಯ ಇರುವುದಿಲ್ಲ. ಆದರೆ, ನಿವೃತ್ತಿಯ ಸಂದರ್ಭದಲ್ಲಿ ಗ್ರಾಚ್ಯುಟಿ (ಇಡಿಗಂಟು) ಸೌಲಭ್ಯ ದೊರೆಯಲಿದೆ. ಇದರ ಜೊತೆಗೆ ದೈನಂದಿನ ಕರ್ತವ್ಯ ನಿರ್ವಹಣೆಗೆ ಅನುಕೂಲವಾಗುವಂತೆ ಮೊಬೈಲ್ ಭತ್ಯೆಯನ್ನೂ ಇಲಾಖೆ ಒದಗಿಸುತ್ತದೆ.