ಬಾಹ್ಯಾಕಾಶದಲ್ಲಿ ಭಾರತದ ಹೊಸ ಮೈಲಿಗಲ್ಲು: ಚಂದ್ರನ ಮೇಲೆ ನೆಲೆಸಲು ಐಐಎಸ್‌ಸಿ ವಿಜ್ಞಾನಿಗಳಿಂದ ‘ಭೀಮ್’ ಯೋಜನೆ

ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಮತ್ತೊಂದು ಐತಿಹಾಸಿಕ ಸಾಧನೆಗೆ ಮುಂದಾಗಿದೆ. ಭವಿಷ್ಯದಲ್ಲಿ ಚಂದ್ರ ಹಾಗೂ ಮಂಗಳ ಗ್ರಹಗಳ ಮೇಲೆ ಮಾನವ ವಾಸಕ್ಕೆ ಯೋಗ್ಯವಾದ ವಸತಿಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ‘ಭೀಮ್’ (BHEEM – Bharatiya Habitable Expandable Extraterrestrial Habitat) ಯೋಜನೆಯನ್ನು ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಭಾರತೀಯ ಬಾಹ್ಯಾಕಾಶಯಾನಿ ಶುಭಾಂಶು ಶುಕ್ಲಾ ನೇತೃತ್ವದ ತಂಡ ಈ ನವೀನ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ. ಈ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಪ್ರಸ್ತುತ ಇರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತ (ISS) 2 ಪಟ್ಟು ದೊಡ್ಡದಾದ ವಾಸಸ್ಥಾನವನ್ನು ಚಂದ್ರನಂಗಳದಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ.

‘ಮೇಡ್ ಇನ್ ಇಂಡಿಯಾ’ ಅಭಿಯಾನದಡಿ ರೂಪುಗೊಂಡಿರುವ ಈ ಯೋಜನೆಯು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತವನ್ನು ಸಂಪೂರ್ಣ ಸ್ವಾವಲಂಬಿಯನ್ನಾಗಿಸಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅಮೆರಿಕದ ನಾಸಾ (NASA) ಅಥವಾ ರಷ್ಯಾದ ಬಾಹ್ಯಾಕಾಶ ಸಂಸ್ಥೆಗಳ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದ್ದು, ಬಾಹ್ಯಾಕಾಶದಲ್ಲಿ ಭಾರತದ ಕೀರ್ತಿ ಪತಾಕೆ ಮತ್ತಷ್ಟು ಎತ್ತರಕ್ಕೆ ಹಾರಲಿದೆ.

Leave a Reply

Your email address will not be published. Required fields are marked *