ಇವಿಎಂ ಬಗ್ಗೆ ಸದಾ ದೂರುವ ಕಾಂಗ್ರೆಸ್ ಬ್ಯಾಲೆಟ್ ಪೇಪರ್ ಮೂಲಕ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಪರಾಭವಗೊಂಡಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷವು ‘ಸೋಲಿನ ಶತಕ’ ಬಾರಿಸಲು ಸಜ್ಜಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಕಾಂಗ್ರೆಸ್ ಅನುಭವಿಸಿದ ಮುಖಭಂಗವನ್ನು ಲೇವಡಿ ಮಾಡಿದ್ದಾರೆ.
ನೆಪ ಬಿಟ್ಟು ಅಭಿವೃದ್ಧಿ ಕೆಲಸ ಮಾಡಿ ಕರ್ನಾಟಕದ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯಭೇರಿ ಬಾರಿಸಿದ್ದು, ಒಟ್ಟು 4 ಕ್ಷೇತ್ರಗಳಲ್ಲಿ (2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರ) ಸರಿಸುಮಾರು 2.60 ಲಕ್ಷ ಮತದಾರರು ಎನ್‌ಡಿಎ ಬೆಂಬಲಿಸಿದ್ದಾರೆ. ಕಾಂಗ್ರೆಸ್ ನಾಯಕರು ಎಷ್ಟೇ ಹಣ ಹಂಚಲು ಯತ್ನಿಸಿದರೂ ಪ್ರಜ್ಞಾವಂತ ಮತದಾರರು ತಿರಸ್ಕರಿಸಿದ್ದಾರೆ. ಇನ್ನಾದರೂ ಇವಿಎಂ, ಕೇಂದ್ರ ಸರ್ಕಾರ ಅಥವಾ ಬ್ಯಾಲೆಟ್ ಪೇಪರ್ ಬಗ್ಗೆ ಕುಂಟು ನೆಪ ಹೇಳುವುದನ್ನು ಬಿಟ್ಟು, ಉಳಿದಿರುವ ಅಧಿಕಾರಾವಧಿಯಲ್ಲಿ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಿ ಎಂದು ಜೋಶಿ ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ರೈತರ ನಿರ್ಲಕ್ಷ್ಯ ಮತ್ತು ಸಚಿವರ ವಿರುದ್ಧ ಕಿಡಿ ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರಿಗೆ ಎಸ್‌ಎಪಿ (SAP) ನೀಡದೆ ನಿರ್ಲಕ್ಷಿಸಿದೆ ಹಾಗೂ ಕಾರ್ಖಾನೆಗಳ ವಿದ್ಯುತ್ ದರ ಹೆಚ್ಚಿಸುವ ಮೂಲಕ ಹೊರೆ ಹಾಕಿದೆ ಎಂದು ಅವರು ಆರೋಪಿಸಿದರು. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಪ್ರಹ್ಲಾದ್ ಜೋಶಿ, ಸಚಿವರು ‘ನಿರುದ್ಯೋಗಿ’ಯಂತೆ ವರ್ತಿಸುತ್ತಿದ್ದು, ತಮ್ಮ ಕೆಲಸ ಬಿಟ್ಟು ಸಂಬಂಧವಿಲ್ಲದ ವಿಚಾರಗಳ ಬಗ್ಗೆ ಮಾತನಾಡಿಕೊಂಡು ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.