ಜೂ. 21: ಭಾರತೀಯ ನೌಕಾಪಡೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಕರಿಗೆ ಉತ್ತಮ ಅವಕಾಶ ಲಭಿಸಿದೆ. ಅಗ್ನಿವೀರ್ (ಅಪ್ರೆಂಟಿಸ್) ಹುದ್ದೆಗಳ ಭರ್ತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಜೂನ್ 29ರೊಳಗೆ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಪ್ರಕ್ರಿಯೆಯನ್ನು 01/2027 ಮತ್ತು 02/2027 ಬ್ಯಾಚ್ಗಳಿಗಾಗಿ ನಡೆಸಲಾಗುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಅನ್ನು ಶೇ.50 ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
ನೇಮಕಾತಿ ಪ್ರಕ್ರಿಯೆಯಲ್ಲಿ ಭಾರತೀಯ ನೌಕಾಪಡೆಯ ಪ್ರವೇಶ ಪರೀಕ್ಷೆ (INET), ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿರುವ ಮೂರು ಹಂತಗಳ ಆಯ್ಕೆ ವಿಧಾನ ಅನುಸರಿಸಲಾಗುತ್ತದೆ. ಪ್ರತಿ ಹಂತದಲ್ಲೂ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮುಂದಿನ ಹಂತಕ್ಕೆ ಅವಕಾಶ ನೀಡಲಾಗುತ್ತದೆ.
ಅರ್ಜಿ ಶುಲ್ಕವಾಗಿ 550 ರೂ. ಜೊತೆಗೆ ಜಿಎಸ್ಟಿ ಅನ್ವಯವಾಗಲಿದೆ. ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ದೇಶದ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ ಯುವಕರಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಿದ್ದು, ಆಸಕ್ತರು ಕೊನೆಯ ದಿನಾಂಕಕ್ಕೂ ಮುನ್ನವೇ ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ.