ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಯೊಬ್ಬರು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ನ್ಯೂ ಹೊರೈಜನ್ ಇಂಜಿನಿಯರಿಂಗ್ ಕಾಲೇಜಿನ ಮೂರನೇ ವರ್ಷದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ (AI & ML) ವಿದ್ಯಾರ್ಥಿ ತನ್ವಿತ್ ಮಂಜುನಾಥ್ ಅವರು 2026ನೇ ಸಾಲಿನ Google Student Ambassador ಆಗಿ ಆಯ್ಕೆಯಾಗಿದ್ದಾರೆ.
ದೇಶದ ವಿವಿಧ ಮೂಲೆಗಳಿಂದ ಸುಮಾರು 3 ಲಕ್ಷಕ್ಕೂ ಹೆಚ್ಚು ಯುವಕರು ಈ ಸ್ಪರ್ಧಾತ್ಮಕ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಸೀಮಿತ ಅವಕಾಶಗಳ ನಡುವೆಯೂ ಕಡಬದ ಈ ಯುವ ಪ್ರತಿಭೆ ತನ್ನ ತಾಂತ್ರಿಕ ಕೌಶಲ್ಯ ಮತ್ತು ನಾಯಕತ್ವ ಗುಣಗಳ ಮೂಲಕ ಗೂಗಲ್ ಸಂಸ್ಥೆಯ ಗಮನ ಸೆಳೆದಿದ್ದಾರೆ.
ಈ ಸಾಧನೆಯ ಹಿಂದಿನ ಪರಿಶ್ರಮ ಗಮನಾರ್ಹ. ತನ್ವಿತ್ ಸುಮಾರು ನಾಲ್ಕು ತಿಂಗಳ ಸುದೀರ್ಘ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅರ್ಜಿ ಸಲ್ಲಿಸುವುದರ ಜೊತೆಗೆ, ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ವಿಡಿಯೋವನ್ನು ಕೂಡ ಅವರು ಅಪ್ಲೋಡ್ ಮಾಡಬೇಕಾಗಿತ್ತು. ಲಕ್ಷಾಂತರ ಸ್ಪರ್ಧಿಗಳ ನಡುವೆ ಅವರ ಪ್ರತಿಭೆಯನ್ನು ಗೂಗಲ್ ಗುರುತಿಸಿದೆ.
ಗೂಗಲ್ ಸ್ಟೂಡೆಂಟ್ ಅಂಬಾಸಿಡರ್ ಆಗಿ, ತನ್ವಿತ್ ಅವರು ತಮ್ಮ ಕಾಲೇಜಿನಲ್ಲಿ Google Gemini ಸೇರಿದಂತೆ ಕೃತಕ ಬುದ್ಧಿಮತ್ತೆಯ ಹೊಸ ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ವಹಿಸಲಿದ್ದಾರೆ. ಅಲ್ಲದೆ, ಕಾರ್ಯಾಗಾರಗಳನ್ನು ಆಯೋಜಿಸುವುದು, ತಾಂತ್ರಿಕ ಸಮುದಾಯ ನಿರ್ಮಾಣ ಮತ್ತು ಯುವಕರಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವುದು ಅವರ ಮುಖ್ಯ ಕೆಲಸವಾಗಲಿದೆ.
ಕಡಬದ ತನು ಎಲೆಕ್ಟ್ರಾನಿಕ್ಸ್ ಮಾಲಕರಾದ ಮಂಜುನಾಥ್ ಕೆ. ಮತ್ತು ಶಿಕ್ಷಕಿ ಪದ್ಮಾವತಿ ಎ.ಟಿ. ದಂಪತಿಯ ಪುತ್ರನಾಗಿರುವ ತನ್ವಿತ್, ಬಾಲ್ಯದಿಂದಲೇ ತಂತ್ರಜ್ಞಾನದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಶೈಕ್ಷಣಿಕ ಸಾಧನೆಯ ಜೊತೆಗೆ, ಅವರು ಸಾಫ್ಟ್ವೇರ್ ಮತ್ತು ವೆಬ್ ಡೆವಲಪ್ಮೆಂಟ್, Flask, Python ನಂತಹ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಇತ್ತೀಚೆಗೆ JPMC Code for Good 2025 ಸ್ಪರ್ಧೆಯಲ್ಲಿ ರನ್ನರ್-ಅಪ್ ಸ್ಥಾನವನ್ನೂ ಪಡೆದಿದ್ದರು. ಚಿತ್ರಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಲ್ಲೂ ಅವರು ಸಕ್ರಿಯರಾಗಿದ್ದಾರೆ.
“ಇದು ನನಗೆ ಅತ್ಯಂತ ಸಂತಸದಾಯಕ ಜವಾಬ್ದಾರಿ. ಕಾಲೇಜಿನಲ್ಲಿ ಜೆಮಿನಿಯನ್ನು ಪ್ರತಿನಿಧಿಸುವ ಮತ್ತು ಸಹಪಾಠಿಗಳಿಗೆ AI ಕಲಿಕೆಗೆ ಪ್ರೋತ್ಸಾಹ ನೀಡುವ ಅವಕಾಶ ಸಿಕ್ಕಿರುವುದು ನನ್ನ ಜೀವನದ ಮಹತ್ವದ ಘಟ್ಟವಾಗಿದೆ” ಎಂದು ತನ್ವಿತ್ ತಮ್ಮ ಆಯ್ಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ತನ್ವಿತ್ ಅವರ ಈ ಸಾಧನೆಯು గ్రాಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ, ಮತ್ತು ಗ್ರಾಮದಿಂದಲೂ ಜಾಗತಿಕ ವೇದಿಕೆಯನ್ನು ತಲುಪಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.