ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್ ವಿತರಿಸಲಾಗುತ್ತಿದ್ದು, 104 ಕೋಟಿ ರೂಪಾಯಿ ಮೊತ್ತದ ಶೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಶೈಕ್ಷಣಿಕ ವರ್ಷ ಆರಂಭವಾಗಿ ಎರಡೂವರೆ ತಿಂಗಳು ಕಳೆದರೂ ಜಿಲ್ಲೆಯ ಶೇಕಡಾ 80ರಷ್ಟು ಮಕ್ಕಳಿಗೆ ಇನ್ನೂ ಶೂ ಮತ್ತು ಸಾಕ್ಸ್ ತಲುಪಿಲ್ಲ.
ವಿತರಣೆಯಾಗಿರುವ ಶೂಗಳು ಕೇವಲ ಒಂದು ವಾರದಲ್ಲಿಯೇ ಹರಿದು ಹೋಗುತ್ತಿದ್ದು, ಕಳಪೆ ಗುಣಮಟ್ಟದಿಂದ ಕೂಡಿವೆ. ರಾಜ್ಯದ ಗುತ್ತಿಗೆದಾರರನ್ನು ಕಡೆಗಣಿಸಿ ದೆಹಲಿ ಮೂಲದ ಕಂಪನಿಗೆ ಟೆಂಡರ್ ನೀಡಿರುವುದು ಈ ಕಳಪೆ ವಿತರಣೆ ಮತ್ತು ಅವ್ಯವಹಾರದ ಅನುಮಾನಗಳಿಗೆ ಕಾರಣವಾಗಿದೆ.
ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಅನಿಲ್ ಸೌದಾಗರ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯ 9 ಲಕ್ಷ ವಿದ್ಯಾರ್ಥಿಗಳ ಪೈಕಿ ಕೇವಲ 1 ಲಕ್ಷ ಮಕ್ಕಳಿಗೆ ಮಾತ್ರ ಶೂ ವಿತರಿಸಲಾಗಿದೆ ಎಂದಿದ್ದಾರೆ. ವಿತರಿಸಲಾದ ಬಹುತೇಕ ಶೂಗಳು ಬಳಕೆಗೆ ಯೋಗ್ಯವಾಗಿಲ್ಲ. ದಸರಾ ರಜೆ ಸಮೀಪಿಸುತ್ತಿದ್ದರೂ ಮಕ್ಕಳಿಗೆ ಶೂ ಭಾಗ್ಯ ಸಿಕ್ಕಿಲ್ಲ. ಈ ಕೂಡಲೇ ಕಳಪೆ ಗುಣಮಟ್ಟದ ಶೂ ಪೂರೈಕೆ ಮಾಡಿರುವ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.