ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳಿಗೆ ಇ-ಕೆವೈಸಿ ಕಡ್ಡಾಯ: ಅನರ್ಹರಿಗೆ ಬ್ರೇಕ್ ಹಾಕಲು ಸರ್ಕಾರದ ನಿರ್ಧಾರ.

ಜೂ. 19: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಯೋಜನೆಗಳ ಸೌಲಭ್ಯವನ್ನು ಪಡೆಯುತ್ತಿರುವ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜೊತೆಗೆ, ಅನರ್ಹರು ಹಾಗೂ ದುರುಪಯೋಗವನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳ ಹಣ ಮೃತ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಇನ್ನು ಮುಂದೆ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸಿ ಅನರ್ಹರಿಗೆ ಸೌಲಭ್ಯ ಸಿಗುವುದನ್ನು ತಡೆಯುವ ಉದ್ದೇಶ ಹೊಂದಲಾಗಿದೆ.

ಇದೇ ವೇಳೆ, ಗ್ಯಾರಂಟಿ ಯೋಜನೆಗಳ ಹಣವನ್ನು ಕರ್ನಾಟಕದ ಹೊರಗಿನ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿರುವುದು ಹಾಗೂ ಕೆಲವು ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕ ದುರುಪಯೋಗ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯ ಹಣ ಕರ್ನಾಟಕ ರಾಜ್ಯದ ಬ್ಯಾಂಕ್ ಖಾತೆಗಳಿಗಷ್ಟೇ ಜಮೆಯಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಬ್ಯಾಂಕ್ ಸಾಲ ಹೊಂದಿರುವ ಹಲವು ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾದ ತಕ್ಷಣ ಸಾಲದ ಬಾಕಿಗೆ ಕಡಿತವಾಗುತ್ತಿರುವ ಕಾರಣ, ಖಾತೆ ಬದಲಾವಣೆ ಮಾಡಿಕೊಳ್ಳುವವರಿಗೆ ಯಾವುದೇ ತೊಂದರೆಯಾಗದಂತೆ ಸರಳ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ. ಜೊತೆಗೆ, ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾದ ಕೂಡಲೇ ಫಲಾನುಭವಿಗಳಿಗೆ ವಾಯ್ಸ್ ಮೆಸೇಜ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

ಅರ್ಹ ಬಡ ಕುಟುಂಬಗಳಿಗೆ ಯೋಜನೆಗಳ ಲಾಭ ನಿರಂತರವಾಗಿ ದೊರೆಯುವಂತೆ ನೋಡಿಕೊಳ್ಳುವುದರ ಜೊತೆಗೆ, ಅನರ್ಹ ಫಲಾನುಭವಿಗಳನ್ನು ಗುರುತಿಸಿ ದುರುಪಯೋಗಕ್ಕೆ ಕಡಿವಾಣ ಹಾಕುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

Leave a Reply

Your email address will not be published. Required fields are marked *